ಬೆಂಗಳೂರು: GBA ಚುನಾವಣೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಆಗಸ್ಟ್ ನಲ್ಲಿ ನಡೆಯುತ್ತಾ ಇಲ್ಲವಾ ಎಂಬ ಅನುಮಾನದಲ್ಲೇ ಕೆಲವರು ಕಾಲ ಕಳೆಯುತ್ತಿದ್ದರೆ, ಕೆಲ ಆಕಾಂಕ್ಷಿಗಳು ಈಗಾಗಲೇ ಮತದಾರರ ಮನಗೆಲ್ಲುವ ಕಸರತ್ತು ಆರಂಭಿಸಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿ ವಾರ್ಡ್ ವ್ಯಾಪ್ತಿಯ ಆಕಾಂಕ್ಷಿಗಳ ರಂಗೋಲಿ ಸ್ಪರ್ಧೆಯ ಮೂಲಕ ಮಹಿಳೆಯರ ಮನಗೆಲ್ಲುವ ಪ್ರಯತ್ನ ಬಹಳ ಚರ್ಚೆ ಹುಟ್ಟುಹಾಕಿದೆ. ವಾರ್ಡ್ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಆಕಾಂಕ್ಷಿಗಳು ವಾರ್ಡ್ ವ್ಯಾಪ್ತಿಯ ಮನೆ ಮನೆಗಳ ಬಾಗಿಲಿಗೆ ತೆರಳಿ, ಮಹಿಳೆಯರನ್ನು ಮನವೊಲಿಸುವ ಪ್ರಯತ್ನ ಆರಂಭಿಸಿದ್ದಾರೆ.
ಶಾಸಕ ಎಸ್ ಟಿ ಸೋಮಶೇಖರ್ ನೇತೃತ್ವದಲ್ಲಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರು, ಗ್ಯಾರಂಟಿ ಸಮಿತಿ ಅಧ್ಯಕ್ಷರು ಮತ್ತು ಉಳಿದ ನಾಯಕರ ತಂಡ ಇಡಿ ವಾರ್ಡ್ ವ್ಯಾಪ್ತಿಯಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು, ಪ್ರತಿ ಕುಟುಂಬದ ಮಹಿಳೆಯರು ತಮ್ಮ ಮನೆಯ ಮುಂದೆಯೇ, ರಂಗೋಲಿ ಹಾಕಿ ನಂತರ ಅದನ್ನು ಸಂಭಾದಪಟ್ಟವರಿಗೆ ತೋರಿಸಬೇಕು ಎಂದು ಷರತ್ತು ವಿಧಿಸಲಾಗಿತ್ತು.
ಸಂಜೆ ಪ್ರತಿ ಮನೆಯ ಮುಂದೆ ಬಂದು ಸ್ಥಳೀಯ ನಾಯಕರು ಪರಿಶೀಲನೆ ನಡೆಸಿ ನಂತರ ಮಹಿಳೆಯರಿಂದ ವೋಟರ್ ಐಡಿ ಜೆರಾಕ್ಸ್ ಪಡೆದು, ಅವರಿಗೆ ಬಹುಮಾನ ವಿತರಣೆ ಮಾಡಿದ್ದಾರೆ ಎನ್ನಲಾಗಿದೆ. ಪ್ರತಿ ಮನೆಗೆ ಒಂದೊಂದು ಕುಕ್ಕರ್ ನೀಡೊದ್ದಾರೆ ಎಂಬ ಮಾಹಿತಿ ಇದೆ.
ಶೀಘ್ರವೇ ನೀತಿ ಸಂಹಿತಿ ಜಾರಿಯಾಗುವ ಭೀತಿ: ಮಾಹಿತಿಗಳ ಪ್ರಕಾರ ಜುಲೈ ಹತ್ತರೊಳಗೆ ಚುನಾವಣ ಆಯೋಗ ನೀತಿ ಸಂಹಿತಿ ಜಾರಿಗೊಳಿಸುವ ಸಾಧ್ಯತೆಯಿದ್ದು, ಅಷ್ಟು ಬೇಗನೆ ಚುನಾವಣೆ ಘೋಷಣೆಯಾದರೆ, ಮತದಾರರನ್ನು ಒಲಿಸಿಕೊಳ್ಳಲು ಆಕಾಂಕ್ಷಿಗಳಿಗೆ ಕಾಲವಕಾಶ ಸಿಗುವುದಿಲ್ಲ. ಜತೆಗೆ ಮತದಾರರಿಗೆ ಗಿಫ್ಟ್ ನೀಡಲು ನಿಯಂತ್ರಣ ವಿಧಿಸಲಾಗುತ್ತದೆ. ಈ ಕಾರಣಕ್ಕೆ ಮೊದಲೇ ಮತದಾರರಿಗೆ ಗಿಫ್ಟ್ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎನ್ನಬಹುದು

