ಬೆಂಗಳೂರು: ಅಪಘಾತಕ್ಕೀಡಾದ ವ್ಯಕ್ತಿಗೆ ಸಹಾಯ ಮಾಡುವ ನೆಪದಲ್ಲಿ ಆತನ ಐಫೋನ್ ಕದ್ದ ವ್ಯಕ್ತಿಯೊಬ್ಬ ಅದನ್ನು ಬಳಸಿ 3.5 ಲಕ್ಷ ರುಪಾಯಿ ದೋಚಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಯಲಹಂಕ ನ್ಯೂಟೌನ್ ನಿವಾಸಿ ಸಚಿನ್ ಪ್ರಸಾದ್ ಎಂಬುವವರು ಜೂನ್ 19ರಂದು ಯಲಹಂಕದ ಅಲ್ಲಾಳಸಂದ್ರದಲ್ಲಿ ಅಪಘಾತಕ್ಕೀಡಾಗಿದ್ದರು. ಪಾದಚಾರಿಯನ್ನು ತಪ್ಪಿಸಲು ಕಾರನ್ನು ರಸ್ತೆ ಬದಿಗೆ ಚಲಿಸಿದ ಕಾರಣಕ್ಕೆ ಡಿವೈಡರ್ಗೆ ಹೊಡೆದು ಅಪಘಾತವಾಗಿತ್ತು.
ಈ ವೇಳೆ ಕಾರಿನ ಏರ್ ಬ್ಯಾಗ್ಗಳು ಓಪನ್ ಆಗಿ, ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಆದರೆ, ಒಂದು ಕೈನ ಮೂಳೆ ಮುರಿದಿತ್ತು. ಕೆಲ ಸಮಯದ ನಂತರ ಕೆಲವರು ದಾರಿ ಹೋಕರು ಸಹಾಯಕ್ಕೆ ಧಾವಿಸಿದ್ದು, ಕರೆ ಮಾಡಲು ಐಫೋನ್ ಪಡೆದುಕೊಂಡರು.
ಆ ವ್ಯಕ್ತಿ ಅಂಬ್ಯುಲೆನ್ಸ್ಗೆ ಕರೆ ಮಾಡುವ ನೆಪದಲ್ಲಿ ಸ್ವಲ್ಪ ದೂರು ಹೋಗಿದ್ದು, ಹೆಚ್ಚಿನ ಜನ ಸಮಾಯಸುತ್ತಿದ್ದಂತೆ ಜನಜಂಗುಳಿಯಲ್ಲಿ ಆತ ಪರಾರಿಯಾಗಿದ್ದ ಎನ್ನಲಾಗಿದೆ. ಕೆಲವರು ಫೋನ್ ಕಡೆಗೆ ಗಮನ ನೀಡದೆ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಜೂನ್ 24ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಬದಲಿ ಸಿಮ್ ಕಾರ್ಡ್ ತೆಗೆದುಕೊಳ್ಳುತ್ತಿದ್ದಂತೆ ಅವರ ನಂಬರ್ಗೆ ಬ್ಯಾಂಕ್ನಿಂದ ಅನಧಿಕೃತ ವಹಿವಾಟು ನಡೆದಿರುವ ಬಗ್ಗೆ ಎಸ್ಎಮ್ಎಸ್ಗಳು ಬರಲು ಆರಂಭಿಸಿದವು. ಫೋನ್ ಕದ್ದಿದ್ದ ವ್ಯಕ್ತಿ, ಐಫೋನ್ ನಿಂದ ಸಿಮ್ ಕಾರ್ಡ್ ಅನ್ನು ಆ್ಯಂಡ್ರಾಯ್ಡ್ ಫೋನ್ಗೆ ಬದಲಾಯಿಸಿ ಕೃತ್ಯ ನಡೆಸಿದ್ದನು ಎನ್ನಲಾಗಿದೆ.
ಜೂನ್ 20ರಿಂದ 25ರ ನಡುವೆ 351600 ರೂಗಳ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಆತ ವರ್ಗಾವಣೆ ಮಾಡಿಕೊಂಡಿರುವುದು ತಿಳೀದುಬಂದಿದೆ. ಇದನ್ನು ಅರಿತ ಪ್ರಸಾದ್ ನಂತರ 1903ಗೆ ಕರೆ ಮಾಡಿ ವರದಿ ಮಾಡಿದ್ದಾರೆ. ಇದೀಗ ಈಶ್ಯಾನ್ಯ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕನ ಖಾತೆಯಲ್ಲಿದ್ದ ಎರಡು ಲಕ್ಷ ರುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

