ಹಾಸನ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಗುಡ್ಡ ಕುಸಿತಗೊಂಡಿದ್ದು, ಆತಂಕ ಎದುರಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟಕ್ಕೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿಘಾಟ್ ವ್ಯಾಪ್ತಿಯ ಕಪ್ಪಳ್ಳಿ ಬಳಿ ಗುಡ್ಡ ಕುಸಿತ ಉಂಟಾಗಿದೆ. ಸಕಲೇಶಪುರದಿಂದ ಮಂಗಳೂರು ಕಡೆ ತೆರಳುವ ಮಾರ್ಗದಲ್ಲಿ ಘಟನೆ ನಡೆದಿದ್ದು, ತಕ್ಷಣ ಜೆಸಿಬಿ ಬಳಸಿ ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕಾರ್ಯ ಮಾಡಿದ್ದಾರೆ. ಈ ಬಾರಿ ಗುಡ್ಡ ಕುಸಿದರೂ ಸಂಚಾರಕ್ಕೆ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಶಿರಾಡಿಘಾಟ್ನಲ್ಲಿ ಗುಡ್ಡ ಕುಸಿತದ ಸಾಧ್ಯತೆ ಇರುವ ಸ್ಥಳಗಳನ್ನು ಜಿಲ್ಲಾಡಳಿತ ಗುರುತಿಸಿದೆ.
ಚತುಷ್ಪಥ ರಸ್ತೆ ನಿರ್ಮಾಣದ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ಅಡಿ ಎತ್ತರದ ಗುಡ್ಡಗಳನ್ನು ಕತ್ತರಿಸಿ ರಸ್ತೆ ನಿರ್ಮಿಸಲಾಗಿತ್ತು. ಇದೀಗ ನಿರಂತರ ಸುರಿಯುತ್ತಿರುವ ಮಳೆಯಿಂದ ಮಣ್ಣು ಸಡಿಲಗೊಂಡು ಗುಡ್ಡದ ಭಾಗಗಳು ರಸ್ತೆ ಕಡೆಗೆ ಜಾರುತ್ತಿವೆ. ಮಣ್ಣು ಹಾಗೂ ಗಿಡಗಳು ಸಮೇತ ಗುಡ್ಡದ ಭಾಗ ಹೆದ್ದಾರಿಗೆ ಕುಸಿಯುತ್ತಿದ್ದು, ರಸ್ತೆಯ ಒಂದು ಬದಿಯಲ್ಲಿ ಮಣ್ಣು ಸಂಗ್ರಹವಾಗಿದೆ. ಇನ್ನೂ ಮಳೆ ಇದೇ ರೀತಿ ಮುಂದುವರಿದರೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳದ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಅಲ್ಲದೆ ಸದ್ಯ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಸಿಬ್ಬಂದಿ ತಕ್ಷಣ ತೆರವುಗೊಳಿಸುತ್ತಿದ್ದಾರೆ.

