ಸುದ್ದಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನ ಅನಿವಾರ್ಯ: ಸಿಎಂ ಡಿ.ಕೆ.ಶಿವಕುಮಾರ್

Share It

ಕೆಪಿಸಿಎಲ್ ನ 57ನೇ ಸಂಸ್ಥಾಪನಾ ದಿನಾಚರಣೆ : ರಾಜ್ಯದ ಅಭಿವೃದ್ಧಿಗೆ ಕೈಜೋಡಿಸುವ ಕೆಪಿಸಿಎಲ್ ಸಿಬ್ಬಂದಿ ಸೇರಿ ಎಲ್ಲರೂ ‘ಟೀಂ ಕರ್ನಾಟಕ’

ಬೆಂಗಳೂರು : ರಾಜ್ಯದ ವಿದ್ಯುತ್ ಸಮಸ್ಯೆ ಬಗೆಹರಿಸಲು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕಾರ್ಯಗತಗೊಳಿಸುವುದು ಅನಿವಾರ್ಯವಾಗಿದ್ದು, ಈ ವಿಚಾರದಲ್ಲಿ ಇಟ್ಟ ಹೆಜ್ಜೆಯನ್ನು ಹಿಂದಿಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅರಮನೆ ರಸ್ತೆಯಲ್ಲಿರುವ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 57ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಬಹಳ ಹಿಂದೆಯೇ ಆರಂಭಿಸಲು ಸಿದ್ದತೆಗಳು ನಡೆದಿದ್ದವು. ಆದರೆ, ಆಗಿರಲಿಲ್ಲ. ಈಗ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ವಿವಿಧ ರೀತಿಯ ಅನುಮತಿಗಳನ್ನು ಪಡೆಯಲಾಗುತ್ತಿದೆ. ಆದರೂ ಕೆಲವರು ಆಕ್ಷೇಪಗಳನ್ನು ಎತ್ತುತ್ತಿದ್ದಾರೆ. ಆದರೆ, ಈ ಕಾರಣಕ್ಕೆ ಕಾರಣಕ್ಕೆ ರಾಜ್ಯಕ್ಕೆ ಅಗತ್ಯವಾಗಿರುವ ಈ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ,” ಎಂದು ತಿಳಿಸಿದರು.

“ಈ ಹಿಂದೆ ಯಲಹಂಕದಲ್ಲಿ ಕೆಪಿಸಿಎಲ್ ನಿಂದ ಅನಿಲ ಆಧಾರಿತ ವಿದ್ಯುತ್ ಸ್ಥಾವರವನ್ನು ಆರಂಭಿಸುವ ಸಂದರ್ಭದಲ್ಲೂ ವಿರೋಧಗಳು ವ್ಯಕ್ತವಾಗಿದ್ದವು. ಆದರೆ, ರಾಜ್ಯದ ಪರವಾಗಿ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಈ ಯೋಜನೆ ಮುಂದುವರಿಸಿದ ಕಾರಣ ಯೋಜನೆ ಅನುಷ್ಠಾನಗೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ,” ಎಂದರು.

“ಪಾವಗಡದ ಸೋಲಾರ್ ಪಾರ್ಕ್ ಯೋಜನೆ ಕೈಗೆತ್ತಿಕೊಂಡಾಗ ರೈತರಿಂದ ಭೂಮಿ ಖರೀದಿಸದೆ ಅವರನ್ನು ಪಾಲುದಾರರನ್ನಾಗಿ ಮಾಡಿಕೊಂಡು ಯೋಜನೆ ಅನುಷ್ಠಾನಗೊಳಿಸಿದ್ದು ಇಡೀ ದೇಶಕ್ಕೆ ಮಾದರಿ. ಅಲ್ಲಿ ಪ್ರಸ್ತುತ ಪ್ರಸ್ತುತ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಇದನ್ನು ವಿಸ್ತರಿಸಲು ಇನ್ನೂ 10 ಸಾವಿರ ಎಕರೆ ಭೂಮಿ ಕೊಡಲು ಆ ಭಾಗದ ರೈತರು ಮುಂದೆ ಬಂದಿದ್ದಾರೆ. ವಿಸ್ತರಣಾ ಕಾರ್ಯ ಶೀಘ್ರವೇ ಆರಂಭವಾಗಲಿದೆ,” ಎಂದರು.

“ರಾಜ್ಯ ಸರ್ಕಾರ 1.61 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ಮೂಲಕ ಉಚಿತ ವಿದ್ಯುತ್ ನೀಡುತ್ತಿದ್ದು, ಇದು ಯಶಸ್ವಿಯಾಗಲು ಕೆಪಿಸಿಎಲ್ ಪ್ರಮುಖ ಕಾರಣ. ಗೃಹಜ್ಯೋತಿ ಯೋಜನೆಗೆ ಸರ್ಕಾರ ವಾರ್ಷಿಕ 10 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಅದೇ ರೀತಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಲು ವಾರ್ಷಿಕ 20 ಸಾವಿರ ಕೋಟಿ ರೂ. ಸಬ್ಸಿಡಿ ನೀಡುತ್ತಿದ್ದು, ಒಟ್ಟಾರೆ ಈ ಎರಡು ಯೋಜನೆಗಳಿಂದ ರಾಜ್ಯದ ಜನರಿಗೆ 30 ಸಾವಿರ ಕೋಟಿ ರೂ. ಉಳಿತಾಯವಾಗಿದೆ,” ಎಂದು ಹೇಳಿದರು.

ಟೀಂ ಕರ್ನಾಟಕ: “ರಾಜ್ಯದ ಅಭಿವೃದ್ಧಿಯಲ್ಲಿ ಎಲ್ಲರೂ ಭಾಗೀದಾರರಾಗಬೇಕು. ರಾಜ್ಯಕ್ಕೆ ಬೆಳಕು ನೀಡುವ ನೀವು ಕೇವಲ ಕೆಪಿಸಿಎಲ್ ನೌಕಕರಲ್ಲ. ಟೀಂ ಕರ್ನಾಟಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ. ಎಲ್ಲರೂ ಒಟ್ಟಾಗಿ ರಾಜ್ಯದ ಅಭ್ಯುದಯಕ್ಕೆ ಶ್ರಮಿಸೋಣ,” ಎಂದು ಹೇಳಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಇಡೀ ರಾಜ್ಯಕ್ಕೆ ಅನುಕೂಲ- ಜಾರ್ಜ್
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, “ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮೂಲಕ ಕೇವಲ 125 ಎಕರೆ ಅರಣ್ಯದಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಅದರಲ್ಲೂ ಶಾಶ್ವತವಾಗಿ ಬಳಕೆಯಾಗುವ ಅರಣ್ಯ ಕೇವಲ 25 ಎಕರೆ ಮಾತ್ರ. ಆದರೆ, ಇದರಿಂದ ಇಡೀ ರಾಜ್ಯದ ಜನರಿಗೆ ಅನುಕೂಲವಾಗುತ್ತದೆ. ಆದರೂ ಕೆಲವರು ವೈಯಕ್ತಿಕ ಕಾರಣಗಳಿಗಾಗಿ ಯೋಜನೆಯ ಬಗ್ಗೆ ದೋಷಾರೋಪ ಮಾಡುತ್ತಿದ್ದಾರೆ,” ಎಂದರು.

“ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಂಬಂಧಿಸಿದ ಎಲ್ಲಾ ಇಲಾಖೆಗಳಿಂದ ಅಗತ್ಯ ಅನುಮತಿಗಳು ಸಿಕ್ಕಿದ ಬಳಿಕವೇ ಈ ಯೋಜನೆಯನ್ನು ಕಾರ್ಯಾರಂಭ ಮಾಡುತ್ತೇವೆ. ಒಂದು ಮರ ಕಡಿದರೆ ಹತ್ತು ಮರ ಬೆಳೆಸುತ್ತೇವೆ. ಅನುಮತಿ ಸಿಕ್ಕಿದರೆ ಯೋಜನೆ ಖಂಡಿತವಾಗಿಯೂ ಅನುಷ್ಠಾನವಾಗುತ್ತದೆ,” ಎಂದು ಹೇಳಿದರು.

“2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಬರಗಾಲದ ಮಧ್ಯೆಯೂ ರೈತರು ಮತ್ತು ರಾಜ್ಯದ ಜನರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗಿತ್ತು. ಈ ವರ್ಷವೂ ರಾಜ್ಯದಲ್ಲಿ ಬರಗಾಲವಿದ್ದು, ಈ ಬಾರಿಯೂ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುವುದು. ಈ ಕಾರ್ಯಕ್ಕೆ ನಮ್ಮ ಅಧಿಕಾರಿಗಳು ಶಕ್ತರಿದ್ದಾರೆ,” ಎಂದು ತಿಳಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ: ಸಂಸ್ಥಾಪನಾ ದಿನದ ಅಂಗವಾಗಿ ನಿಗಮದಲ್ಲಿ 25 ವರ್ಷ ಸೇವೆ ಸಲ್ಲಿಸಿದ 8 ಮಂದಿ ಅಧಿಕಾರಿಗಳು, ಸಿಬ್ಬಂದಿಯನ್ನು ಗೌರವಿಸಲಾಯಿತು. 16 ಮಂದಿ ಅತ್ಯುತ್ತಮ ಎಂಜಿನಿಯರ್ ಗಳನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ವಿದ್ಯುತ್ ಸ್ಥಾವರ ನಿರ್ವಹಣೆಗಾಗಿ ಸ್ಥಾವರದ ಮುಖ್ಯಸ್ಥರನ್ನು ಅಭಿನಂದಿಸಲಾಯಿತು. ಅಲ್ಲದೆ, ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ 94 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಪಿ., ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್ ಪ್ರಸಾತ್ ಮನೋಹರ್, ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್. ನಾಗರಾಜ, ತಾಂತ್ರಿಕ ನಿರ್ದೇಶಕ ಎಂ.ಆರ್.ಗಂಗಾಧರ್, ನಿಗಮದ ಮುಖ್ಯ ಜಾಗೃತ ಅಧಿಕಾರಿ ಸಿರಿಗೌರಿ, ಮಾನವ ಸಂಪನ್ಮೂಲ ನಿರ್ದೇಶಕಿ ರೇಖಾ ಟಿ., ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಡಾ. ಆಶಾ ಎಸ್., ಕೆಪಿಸಿಎಲ್ ನಿರ್ದೇಶಕ ಮಂಡಳಿಯ ನಿರ್ದೇಶಕ ವೀರೇಂದ್ರ ಕೆ., ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಮನೋಹರ್ ಇದ್ದರು.


Share It

You cannot copy content of this page