ಸುದ್ದಿ

ರೇಣುಕಾಸ್ವಾಮಿ‌ ಹತ್ಯೆ ಪ್ರಕರಣದಲ್ಲಿ‌ ದರ್ಶನ್‌ಗೆ ಮತ್ತೆ ಹಿನ್ನಡೆ; ಕೋರ್ಟ್ ಕಲಾಪಕ್ಕೆ ಖುದ್ದು ಹಾಜರಿಗೆ ಸಲ್ಲಿಸಿದ್ದ ಅರ್ಜಿ ವಜಾ

Share It

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಮಗೆ ವಿಡಿಯೋ ಕಾನ್ಫರೆನ್ಸ್ ಬದಲು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಲು ಅವಕಾಶ ನೀಡಬೇಕು ಎಂದು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಂಡಿದೆ. 

ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ‌ 59ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಸೋಮವಾರ ಆದೇಶ ಪ್ರಕಟಿಸಿದ್ದು, ಅರ್ಜಿ ವಜಾಗೊಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಆರೋಪಿಗಳಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. 

ಕಕ್ಷಿದಾರರು (ದರ್ಶನ್) ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಲು ಹೆಡ್ ಫೋನ್ ವ್ಯವಸ್ಥೆ ಇಲ್ಲ. ಹೀಗಾಗಿ ಅವರಿಗೆ ಖುದ್ದು ಹಾಜರಿಗೆ ಆದೇಶ ನೀಡಬೇಕು ಎಂದು ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ವಾದ ಮಂಡಿಸಿದ್ದರು. ಆದರೆ, ಇದಕ್ಕೆ ಎಸ್ ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಸಾಕ್ಷ್ಯ ವಿಚಾರಣೆ ವೇಳೆ ಅಗತ್ಯವಿರುವಾಗ ಸಂಪರ್ಕದ ಅವಕಾಶ ಮಾಡಿಕೊಟ್ಟಿದೆ. ವಕೀಲರೊಂದಿಗೆ ಆರೋಪಿಗಳ ಸಂಪರ್ಕಕ್ಕೆ ಅವಕಾಶವಿದೆ. ಸಾಕ್ಷ್ಯ ವಿಚಾರಣೆಗೆ ಮೊದಲು, ನಡುವೆ, ನಂತರ ಸಂಪರ್ಕಿಸಬಹುದಾಗಿದೆ. ಸಾಕ್ಷಿಗಳ ಹೇಳಿಕೆ ಸ್ಪಷ್ಟವಾಗಿ ಕೇಳುವಂತೆ ವ್ಯವಸ್ಥೆ ಕಲ್ಪಿಸಿ ಎಂದು ಸಿವಿಲ್ ನ್ಯಾಯಾಲಯದ ತಾಂತ್ರಿಕ ವಿಭಾಗಕ್ಕೆ ಕೋರ್ಟ್ ಸೂಚನೆ ನೀಡಿದೆ. ಕೋರ್ಟ್ ಗಳಿಗಾಗಿ ರೂಪಿಸಿರುವ ವಿಡಿಯೋ ಕಾನ್ಫರೆನ್ಸ್ ನಿಯಮ 8.3 ಅಡಿಯಲ್ಲಿ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.

ಮತ್ತೊಂದೆಡೆ ಪ್ರಕರಣದ ಎ14 ಆರೋಪಿ ಪ್ರದೂಷ್  ಸಲ್ಲಿಸಿದ್ದ ಮಾಫಿ‌ ಸಾಕ್ಷಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಂದ ಪ್ರಾಥಮಿಕ ಹೇಳಿಕೆ ಪಡೆದಿದೆ. ಮಾಫಿ ಸಾಕ್ಷಿ ಬಗ್ಗೆ ನಿಮಗೆ ಗೊತ್ತಿದೆಯಾ? ನೀವು ಮಾಫಿ ಸಾಕ್ಷಿ ಆಗಲು ನಿಮಗೆ ಒಪ್ಪಿಗೆ ಇದೆಯಾ? ನಿಮ್ಮ ಪರ ಅರ್ಜಿ ಸಲ್ಲಿಸಿರುವುದು ನಿಮ್ಮ ಗಮನಕ್ಕೆ ಇದೆಯಾ ಎಂದು ಪ್ರದೂಷ್ ಬಳಿ ನ್ಯಾಯಾಲಯ ಮಾಹಿತಿ ಪಡೆದಿದೆ. ಇದಾದ ಬಳಿಕ ಮಂಗಳವಾರ ಅರ್ಜಿ ವಿಚಾರಣೆ ಮಾಡಿ ಆದೇಶ ನೀಡುವುದಾಗಿ‌ ನ್ಯಾಯಾಧೀಶರು ತಿಳಿಸಿದ್ದಾರೆ.


Share It

You cannot copy content of this page