ಬೆಂಗಳೂರು: ಕನ್ನಡ ಕಾದಂಬರಿಗಳಿಗೆ ದಶಕಗಳ ಹಿಂದೆಯೇ ಮನೋವೈಜ್ಞಾನಿಕ ವಿಷಯ ವಸ್ತುವನ್ನಾಗಿ ಇಟ್ಟುಕೊಂಡಿದ್ದ ತ್ರಿವೇಣಿಯವರು ತಮ್ಮ ಈ ವೈವಿಧ್ಯತೆಯಿಂದಾಗಿಯೇ ಇಂದಿಗೂ ಪ್ರಸ್ತುತ ರಾಗಿದ್ದಾರೆ ಎಂದು ಖ್ಯಾತ ಲೇಖಕಿ ದೂರದರ್ಶನದ ವಿಶ್ರಾಂತ ನಿರ್ದೇಶಕರಾದ ನಿರ್ಮಲ ಯಲಿಗಾರ ಹೇಳಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ ಇಂದು ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತ್ರಿವೇಣಿ ಅವರ ಬೆಕ್ಕಿನ ಕಣ್ಣು ಕಾದಂಬರಿ ಕುರಿತು ಅವರು ಮಾತನಾಡುತ್ತಿದ್ದರು.
ಬೆಕ್ಕಿನ ಕಣ್ಣು ಕಾದಂಬರಿ ಪ್ರಕಟವಾಗಿ 72 ವರ್ಷಗಳಾಗಿದೆ ಆದರೂ ಇಂದಿಗೂ ಅದು ಜನಪ್ರಿಯ ವಾಗಿದೆ ಎಂದರೆ ಆ ಕಾದಂಬರಿಯ ವಸ್ತು ಹಾಗೂ ಅದರ ವೈವಿಧ್ಯತೆಯಿಂದ ಮಾತ್ರ ಎಂದು ಅವರು ತಿಳಿಸಿದರು. ಕೇವಲ 35 ವರ್ಷ ಬದುಕಿದ್ದ ತ್ರಿವೇಣಿ 21 ಕಾದಂಬರಿ 4 ಕಥಾ ಸಂಕಲನಗಳನ್ನು ರಚಿಸಿದ್ದರು. ಅವರ ಬಹುತೇಕ ಎಲ್ಲ ಕಾದಂಬರಿಗಳು ಮನೋವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ, ಅವರು ಬದುಕಿದ್ದ ಕಾಲಘಟ್ಟದಲ್ಲಿ ಮಾತನಾಡಲು ಹಿಂಜರಿಯುತ್ತಿದ್ದಂತಹ ವಿಷಯಗಳ ಮೇಲೆ ಮಹಿಳಾ ಲೈಂಗಿಕತೆ, ಬಾಣಂತಿಯರ ಸನ್ನಿ, ಮಹಿಳೆಯರ ಮಾನಸಿಕ ತಲ್ಲಣಗಳ ಚಿತ್ರಣಗಳು ಅವರ ಕಾದಂಬರಿಗಳಲ್ಲಿವೆ ಇದು ತ್ರಿವೇಣಿಯವರು ಆ ಕಾಲಘಟ್ಟದಲ್ಲಿ ತೋರಿದ ಧೈರ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ತ್ರಿವೇಣಿಯವರು ಸ್ತ್ರೀವಾದದ ನೆಲಗಟ್ಟಿನ ಮೇಲೆ ಕಾದಂಬರಿ ರಚಿಸಿದವರಲ್ಲ, ಅವರ ಕಾದಂಬರಿಗಳಲ್ಲಿ ಸ್ತ್ರೀಯರ ಬೆಂಬಲಕ್ಕೆ ನಿಂತ ಪಾತ್ರಗಳೆಲ್ಲವೂ ಪುರುಷ ಪಾತ್ರಗಳೆ ಆಗಿವೆ ಹಾಗಾಗಿ ಅವರು ಶ್ರೀ ವಾದಿ ಲೇಖಕರಲ್ಲ ಆದರೆ ಸ್ತ್ರೀಯರ ಬದುಕಿನ ಬವಣೆ, ಮತ್ತು ಸ್ತ್ರೀಯರ ಲೈಂಗಿಕ ತುಮುಲ, ಮಾನಸಿಕ ಒತ್ತಡಗಳು ಹಾಗೂ ಅದರಿಂದ ಅನುಭವಿಸುವ ಪಡಿಪಾಟಲುಗಳು ಮುಂತಾದವುಗಳನ್ನು ಒಳಗೊಂಡಿದೆ. ಅನಸೂಯ ಶಂಕರ್ ಎಂಬ ಹೆಣ್ಣು ಮಗಳು ತ್ರಿವೇಣಿ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಇಂದಿಗೂ ತಮ್ಮ ಅಪಾರ ಜನಪ್ರಿಯತೆ ಉಳಿಸಿಕೊಂಡಿರುವುದು ಒಂದು ವಿಸ್ಮಯ ಎಂದು ನಿರ್ಮಲ ಯಲಿಗಾರ ಬಣ್ಣಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಕನ್ನಡ ಪುಸ್ತಕ ಲೋಕಕ್ಕೆ ಮೊಬೈಲ್ ಎಂಬ ಮಾರಕ ಆವರಿಸಿದೆ, ವಿದ್ಯಾರ್ಥಿಗಳು ಮೊಬೈಲಿನ ಮೋಹಕ್ಕೆ ಬೀಳದೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಪಠ್ಯಪುಸ್ತಕಗಳು ಪರೀಕ್ಷೆಗಳನ್ನು ಎದುರಿಸಲು ಅವಶ್ಯವಾದರೇ
ಬದುಕಿನ ಪರೀಕ್ಷೆ ಎದುರಿಸಲು ಸೃಜನಶೀಲ ಸಾಹಿತ್ಯ ಕೃತಿಗಳು ನೆರವಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಶೇಖರ್ ಹೆಚ್ ಎಸ್ ಉಪಸ್ಥಿತರಿದ್ದರು.
ಕಾಲೇಜಿನ ಪರೀಕ್ಷಾ ನಿಯಂತ್ರಕರಾದ ಪ್ರೊ. ನಾಗರಾಜ ಎನ್ ಹಾಗೂ ಪ್ರೊ. ಗೀತಾಂಜಲಿ ಸಿ ಹಾಜರಿದ್ದರು.
ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಭಾಗಿಯಾಗಿದ್ದರು.

