ಅಪರಾಧ ಸುದ್ದಿ

CISF ಯೋಧನಿಂದ ಗುಂಡಿನ ದಾಳಿ: ಸಹಾಯಕ ಕಮಾಂಡೆಂಟ್ ಸೇರಿ ನಾಲ್ವರ ಸಾವು

Share It

ಜಮ್ಮು/ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಬಶೋಲಿ ಪ್ರದೇಶದಲ್ಲಿರುವ ‘ಸೇವಾ’ ವಿದ್ಯುತ್ ಯೋಜನೆಯಲ್ಲಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಸಿಬ್ಬಂದಿಯೊಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ ಸಹಾಯಕ ಕಮಾಂಡೆಂಟ್ ಸೇರಿದಂತೆ ನಾಲ್ವರು ಸಿಐಎಸ್‌ಎಫ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ರಂಜಿತ್ ಸಾಗರ್ ಅಣೆಕಟ್ಟಿನ ಬಳಿಯಿರುವ ಸೇವಾ ವಿದ್ಯುತ್ ಯೋಜನೆಯ ಆವರಣದಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾದ ತಕ್ಷಣವೇ ಪೊಲೀಸ್ ತಂಡವೊಂದು ಸ್ಥಳಕ್ಕೆ ಧಾವಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಪ್ರಾಥಮಿಕ ತನಿಖೆಯ ಪ್ರಕಾರ, ಗುಂಡಿನ ದಾಳಿಯಲ್ಲಿ ಸಹಾಯಕ ಕಮಾಂಡೆಂಟ್ ಸೇರಿದಂತೆ ನಾಲ್ವರು ಸಿಐಎಸ್‌ಎಫ್ ಸಿಬ್ಬಂದಿ ಸಾವನ್ನಪ್ಪಿರುವ ಬಗ್ಗೆ ತಿಳಿದುಬಂದಿದೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರದೇಶವು ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದ ಗಡಿಯಲ್ಲಿದ್ದು, ಈ ವಿದ್ಯುತ್ ಯೋಜನೆಯು ಜಮ್ಮು ಮತ್ತು ಕಾಶ್ಮೀರದ ವ್ಯಾಪ್ತಿಯಲ್ಲಿದೆ.

“ಮಾಶ್ಕಾದಲ್ಲಿರುವ ಸೇವಾ ಯೋಜನೆಯಲ್ಲಿ ನಿಯೋಜನೆಗೊಂಡಿದ್ದ ಸಿಐಎಸ್‌ಎಫ್ ಸಿಬ್ಬಂದಿಯ ನಡುವೆ ನಡೆದ ವಾಗ್ವಾದದ ನಂತರ ಈ ಗುಂಡಿನ ದಾಳಿ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಸಿಐಎಸ್‌ಎಫ್ ಸಿಬ್ಬಂದಿ ಗಾಯಗೊಂಡಿದ್ದರು ಮತ್ತು ಅವರನ್ನು ಹಿಮಾಚಲ ಪ್ರದೇಶದ ಎನ್‌ಹೆಚ್‌ಪಿಸಿ (NHPC) ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ ಸಿಬ್ಬಂದಿಯನ್ನು ಸಹಾಯಕ ಕಮಾಂಡೆಂಟ್ ಅಂಕಿತ್ ಕುಮಾರ್ ಪಾಂಡೆ, ಸಬ್ ಇನ್ಸ್‌ಪೆಕ್ಟರ್ ಲಕ್ಷ್ಮಣ್ ಸಿಂಗ್, ಕಾನ್​ಸ್ಟೇಬಲ್​ ರಫೀಕ್ ಅಹ್ಮದ್ ಮತ್ತು ಕಾನ್​ಸ್ಟೇಬಲ್​ ಸಂದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿ ಎಂದು ಶಂಕಿಸಲಾದ ಸಿಐಎಸ್‌ಎಫ್ ಸಿಬ್ಬಂದಿ ಅಭಿದೇಶ್ ಸಿಂಗ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಕಾರಣವೇನೆಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಸಿಐಎಸ್‌ಎಫ್ ಮೂಲಗಳು ತಿಳಿಸಿವೆ.


Share It

You cannot copy content of this page