ರಾಜಕೀಯ ಸುದ್ದಿ

ನಾಳೆ ಬೆಳಗ್ಗೆವರೆಗೂ ಪೊಲೀಸರಿಗೆ ಗಡುವು ಕೊಟ್ಟ ಹೆಚ್.ಡಿ. ಕುಮಾರಸ್ವಾಮಿ:ಕಿರುಕುಳ ಮುಂದುವರಿಸಿದರೆ ಪೊಲೀಸ್ ಠಾಣೆಗಳಿಗೆ ಮುತ್ತಿಗೆ

Share It

ಬೆಂಗಳೂರು; ಎಸ್ ಐಆರ್ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ, ಅವರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸುವುದನ್ನು ನಿಲ್ಲಿಸದಿದ್ದರೆ ನಾಳೆ (ಮಂಗಳವಾರ) 10 ಗಂಟೆಯ ನಂತರ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಸೋಮವಾರ ರಾಜ್ಯ ಕಾಂಗ್ರೆಸ್ ಸರಕಾರವು ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಾ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ ನಂತರ ಅವರು ಎನ್ ಡಿಎ ನಾಯಕರೊಂದಿಗೆ ಮಾಧ್ಯಮಗಳ ಜತೆ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ‌ಸರಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಸರ್ಕಾರವು ಎಫ್‌ಐಆರ್ ಹಾಕುವ ವಿಚಾರದಲ್ಲಿ ನಡೆಸುತ್ತಿರುವ‌ ರಾಜಕೀಯ ಡ್ರಾಮಾವನ್ನು ಖಂಡಿಸಿದರು. ಇದು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವೇ ನಾಚಿಕೆಗೇಡಿನ ಪ್ರದರ್ಶನ ನಡೆಸಿದೆ. ಗೂಂಡಾ ಸರಕಾರವು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವಾಗ ಇದು ಗೂಂಡಾ ಸರ್ಕಾರವಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದರು.

ಕಾನೂನುಬಾಹಿರ ಬಂಧನಗಳನ್ನು ತಕ್ಷಣ ನಿಲ್ಲಿಸುವಂತೆ ಮತ್ತು ಕೇಂದ್ರ ಚುನಾವಣಾ ಆಯೋಗದಿಂದ ಸ್ಪಷ್ಟನೆ ನಿಡುವಂತೆ ಮುಖ್ಯ ಚುನಾವಣಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ. ಫಾರಂ-7 ಸಲ್ಲಿಕೆಯು ಕಾನೂನುಬಾಹಿರವಲ್ಲ. ಈ ಬಗ್ಗೆ ನ್ಯಾಯಾಲಯ ಸ್ಪಷ್ಟನೆ ನೀಡಿದೆ. ಸರಕಾರವು ನೈಸ್, ಬಿಡದಿ ಟೌನ್ ಶಿಪ್ ಯೋಜನೆ, ಕೆಪಿಎಸ್ಸಿ ಹಗರಣಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಸರಕಾರ ಈ ಡ್ರಾಮಾ ಮಾಡುತ್ತಿದೆ ಎಂದು ಸಚಿವರು ಕಟುವಾಗಿ ಟೀಕಿಸಿದರು. ಸರಕಾರಕ್ಕೆವು ಅಧಿಕಾರಿಗಳಿಗೆ ಸರಿಯಾದ ಸೂಚನೆ ನೀಡದಿದ್ದರೆ ಮತ್ತು ದಬ್ಬಾಳಿಕೆಯನ್ನು ಮುಂದುವರಿಸಿದರೆ ನಾಳೆ 10 ಗಂಟೆಯ ನಂತರ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುತ್ತೇವೆ ರಾಜ್ಯ ಸರಕಾರಕ್ಕೆ‌ ಕುಮಾರಸ್ವಾಮಿ ಅವರು ಖಡಕ್ ಎಚ್ಚರಿಕೆ ನೀಡಿದರು.

ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ, ಅವರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸುವುದನ್ನು ನಿಲ್ಲಿಸಬೇಕು. ಪೊಲೀಸ್ ಇಲಾಖೆಯನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಬಾರದು. ರಾಜ್ಯ ಸರಕಾರ ಈ ರೀತಿಯ ಕಾನೂನುಬಾಹಿರ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸಿದರೆ ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಅದರ ವಿರುದ್ಧ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುವ ಚಳವಳಿ ಶುರು ಮಾಡುತ್ತೇವೆ. ರಾಜ್ಯದ ಐಜಿ, ಡಿಜಿ ಮತ್ತು ಕಮಿಷನರ್ ಅವರು ತಮ್ಮ ಅಧೀನದ ಅಧಿಕಾರಿಗಳಿಗೆ ಕಾನೂನುಬದ್ಧವಾಗಿ ನಡೆದುಕೊಳ್ಳಲು ಸರಿಯಾದ ಸೂಚನೆ ನೀಡಬೇಕು. ಇಲ್ಲವಾದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಅವರು ಎಚ್ಚರಿಸಿದರು.


Share It

You cannot copy content of this page