ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೋಷ್ ವಿರುದ್ಧ ದರ್ಶನ್ ಸಲ್ಲಿಸಿರುವ ಎರಡು ಅರ್ಜಿಗಳನ್ನು ಸಿಸಿಹೆಚ್ 59ನೇ ಕೋರ್ಟ್ ವಜಾಗೊಳಿಸಿದೆ.
ಜೈಲಿಂದ ಪ್ರದೋಷ್ ಕರೆತರುವಾಗ ಮತ್ತು ಕೋರ್ಟ್‌ಗೆ ಹಾಜರುಪಡಿಸಿದಾಗ ಯಾರೊಂದಿಗೂ ಮಾತನಾಡಲು ಅವಕಾಶ ನೀಡಬಾರದು ಮತ್ತು ಮಾಫಿ ಸಾಕ್ಷಿ ದಾಖಲು ವೇಳೆ ನಿನ್ನೆ ಮರೆತಿದ್ದೆ ಎಂದು, ಅದನ್ನು ಮತ್ತೊಮ್ಮೆ ಸೇರಿಸಲು ಪ್ರದೋಷ್‌ಗೆ ಅವಕಾಶ ನೀಡಬಾರದು. ಮೊದಲ ದಿನ ಪ್ರದೋಷ್ ನಿನ್ನೆ ಹೇಳಲು ಮರೆತಿದ್ದೆ ಅಂತಾ ಎರಡನೇ ದಿನ ಹೇಳಿಕೆ ನೀಡಿದ್ದರು. ಅಂತಹ ಹೇಳಿಕೆಯನ್ನು ಮಾಫಿ ಸಾಕ್ಷಿಯಲ್ಲಿ ದಾಖಲು ಮಾಡಿಕೊಳ್ಳಬಾರದು. ಹೇಳಿಕೆ ಪ್ರಕ್ರಿಯೆಯಿಂದ ಆ ಅಂಶವನ್ನು ಡಿಲೀಟ್ ಮಾಡಬೇಕು ಎಂದು ದರ್ಶನ್ ಪರ ವಕೀಲರು ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಕುರಿತು ನಡೆದ ವಾದ-ಪ್ರತಿವಾದ ಆಲಿಸಿದ ಕೋರ್ಟ್, ದರ್ಶನ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ವಜಾಗೊಳಿಸಿದೆ.
ಕಾಮಾಕ್ಷಿಪಾಳ್ಯ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ರಮಣಿ ಪ್ರದೋಷ್ರನ್ನು ಕಳೆದ ಸೆ.28, 29ರಂದು ಜೈಲಿನಿಂದ ಕೋರ್ಟ್‌ಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಪ್ರದೋಷ್ ಜತೆಗೆ ಅವರಿಗೆ ಮಾತನಾಡಲು ಅವಕಾಶ ಸಿಕ್ಕಿದೆ. ಊಟ ಸಮಯದಲ್ಲಿ ಪೊಲೀಸ್ ಜೀಪ್‌ನಲ್ಲಿ ಪ್ರದೋಷ್ ಕೂತಿದ್ದರು. ಆಗ ಯಾವೆಲ್ಲಾ ಸಾಕ್ಷ್ಯ ನುಡಿಯಬೇಕು ಎಂದು ಇನ್ಸ್‌ಪೆಕ್ಟರ್ ಹೇಳಿಕೊಟ್ಟಿದ್ದಾರೆ. ಸೆ.29ರಂದು ಪ್ರದೋಷ್ ಜತೆಗೆ ಅವರ ವಕೀಲರು ಕೋರ್ಟ್‌ಹಾಲ್‌ನಲ್ಲಿ 15 ನಿಮಿಷ ಮಾತನಾಡಿದ್ದಾರೆ. ಅದರಿಂದ ಸೆಪ್ಟಂಬರ್ 30ರಂದು ಪ್ರದೋಷ್, ಸೆ.28, 29ರಂದು ನೀಡಿದ್ದ ಹೇಳಿಕೆಗಳಿಗೆ ಹೆಚ್ಚಿನ ಅಂಶ ಸೇರಿಸಿ ಸಾಕ್ಷ್ಯ ದಾಖಲಿಸಿದ್ದಾರೆ. ಅದು ಪ್ರದೋಷ್ ಸಾಕ್ಷ್ಯ ಹೇಳಿಕೆಯ ಪ್ಯಾರಾ 66 ಮತ್ತು 101ರಲ್ಲಿದೆ ಎಂದು ದರ್ಶನ್ ಪರ ವಕೀಲ ಹಸ್ಮತ್ ಪಾಷಾ ಆಕ್ಷೇಪಿಸಿದ್ದರು.
ಅಲ್ಲದೆ, ಹೆಚ್ಚುವರಿಯಾಗಿ ಸೇರಿದ ಈ ಸಾಕ್ಷ್ಯ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿಯೇ ಇಲ್ಲ. ಅದು ಅತ್ಯಂತ ನಿರ್ಣಾಯಕ ಸಾಕ್ಷ್ಯವಾಗಿದ್ದು, ಕಾನೂನು ತಜ್ಞರಿಗೆ ಮಾತ್ರ ತಿಳಿಯದಷ್ಟು ಜಠಿಲತೆಯಿಂದ ಕೂಡಿದೆ. ಹೀಗಾಗಿ, ಇದು ಕಟ್ಟುಕಥೆಯಂತೆ ತೋರಲಿದ್ದು, ಆರೋಪಿ ದರ್ಶನ್ ಸಮರ್ಥನೆಗೆ ಗಂಭೀರ ಪರಿಣಾಮ ಬೀರಿದೆ. ಆದ್ದರಿಂದ ಸಾಕ್ಷ್ಯದ ಈ ಭಾಗವನ್ನು ಪರಿಗಣಿಸಬಾರದು ಎಂದು ದರ್ಶನ್ ಅರ್ಜಿ ಸಲ್ಲಿಸಿದ್ದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್, ಜೈಲಿನಿಂದ ನ್ಯಾಯಾಲಯಕ್ಕೆ ಪ್ರದೋಷ್ನನ್ನು ಕರೆತಂದ ವಾಹನದಲ್ಲಿ ಇನ್ಸ್‌ಪೆಕ್ಟರ್ ಸುಬ್ರಹ್ಮಣಿ ಇರಲಿಲ್ಲ. ಅವರು ಪ್ರದೋಷ್ ಇದ್ದ ವಾಹನಕ್ಕೆ ದಾರಿ ತೋರಿಸುವ ಪೈಲಟ್ ವ್ಯಾನ್‌ನಲ್ಲಿದ್ದರು. ಇನ್ನು ಪ್ರದೋಷ್ ಇದ್ದ ವಾಹನದಲ್ಲಿ ಕೇವಲ ಸಿಎಆರ್ ಪೊಲೀಸರಿದ್ದರು. ಅವರು ಬಾಡಿವೋರ್ನ್ ಕ್ಯಾಮರಾ ಧರಿಸಿದ್ದರು. ಅದರಲ್ಲಿ ಎಲ್ಲಾ ದೃಶ್ಯಗಳು ದಾಖಲಾಗಿವೆ. ಆದ್ದದರಿಂದ ದರ್ಶನ್ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಪ್ರದೋಷ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆತನ ಸಾಕ್ಷ್ಯವನ್ನು ದಾಖಲಿಸಲಾಗಿದೆ. ದರ್ಶನ್ ಮಂಡಿಸಿರುವ ವಾದವು ಸಾಕ್ಷ್ಯಾಧಾರಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದ ವಿಷಯವಾಗಿದೆ. ಅವುಗಳನ್ನು ಮುಂದಿನ ಹಂತದಲ್ಲಿ ಪರಿಗಣಿಸಬೇಕಾಗುತ್ತದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮಧ್ಯಪ್ರವೇಶವು ಅಗತ್ಯವಿರುವಂತಹ ಯಾವುದೇ ನಿರ್ದಿಷ್ಟ ಸನ್ನಿವೇಶವು ಗಮನಕ್ಕೆ ಬಂದರೆ, ಆ ಕುರಿತು ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿ ದರ್ಶನ್ ಅರ್ಜಿಗಳನ್ನು ವಜಾಗೊಳಿಸಿದೆ.
ಪ್ರದೋಷ್ ಮಂಗಳವಾರವೂ ತನ್ನ ಸಾಕ್ಷ್ಯವನ್ನು ದಾಖಲಿಸಿದ್ದಾರೆ. ಆದರೆ, ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಕ್ಷ್ಯ ದಾಖಲು ಪ್ರಕ್ರಿಯೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ.
