ಕಲಾವಿದರ ಸೇವೆಗೆ ಪ್ರಿಂಟ್ ಬಿನಾಲೆ ಇಂಡಿಯಾ-2026 ಗೌರವ
ಬಸವರಾಜಾಚಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಬೆಂಗಳೂರು: ದೆಹಲಿಯಲ್ಲಿ ನಡೆದ ಪ್ರಿಂಟ್ ಬಿನಾಲೆ ಇಂಡಿಯಾ 2026 ಪ್ರಶಸ್ತಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಕಬ್ಬೂರು ಗ್ರಾಮದ ಕಲಾವಿದ ಕೆ.ಆರ್. ಬಸವರಾಜಾಚಾರ್ ಅವರಿಗೆ ಲಭಿಸಿದೆ.
ದೆಹಲಿಯ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳ ಶ್ರೀಮತಿ ದ್ರೌಪದಿ ಮುರ್ಮು ಅವರು ಕಲಾವಿದ ಕೆ.ಆರ್. ಬಸವರಾಜಾಚಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರಸಿಂಗ್ ಶೇಖಾವತ್, ಸಚಿವಾಲಯದ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಉಪಸ್ಥಿತರಿದ್ದರು.
ಪ್ರಿಂಟ್ ಮೇಕಿಂಗ್ ಮಾಧ್ಯಮದ 3ನೇ ಹಾಗೂ 5ನೇ ಅಂತರರಾಷ್ಟ್ರೀಯ ಲೈಫ್ಟೈಮ್ ಸ್ಕಿಲ್ಸ್ ವಿಭಾಗದಲ್ಲಿ ಕರ್ನಾಟಕದ ಕಲಾಕೃತಿಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಕೇಂದ್ರ ಲಲಿತಕಲಾ ಅಕಾಡೆಮಿ ಈ ಪ್ರದರ್ಶನ ಆಯೋಜನೆಯನ್ನು ಮಾಡಿದ್ದವು.
ಈ ಕಲಾಪ್ರದರ್ಶನದಲ್ಲಿ 34 ದೇಶಗಳ ಒಟ್ಟು 1,449 ಕಲಾಕೃತಿಗಳು ಭಾಗವಹಿಸಿದ್ದವು. ಇದರಲ್ಲಿ ತೀರ್ಪುಗಾರರ ತಂಡವು 204 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿತ್ತು.
ಪ್ರದರ್ಶನದಲ್ಲಿ ಅತ್ಯುತ್ತಮ ಕಲಾಕೃತಿ ಪ್ರದರ್ಶನ ಮಾಡಿದ ಫ್ರಾನ್ಸ್, ಪೋಲೆಂಡ್, ಕೊರಿಯಾ ಹಾಗೂ ಭಾರತದ ಇಬ್ಬರು ಕಲಾವಿದರು ಸೇರಿ ಐವರು ಆಯ್ಕೆಯಾದರು. ಪ್ರಶಸ್ತಿಯು 2 ಲಕ್ಷ ರೂ ನಗದು ಬಹುಮಾನವನ್ನು ಒಳಗೊಂಡಿದೆ.
ಕರ್ನಾಟಕದ ಕಲಾವಿದ ಕೆ.ಆರ್. ಬಸವರಾಜಾಚಾರ್ ಅವರಿಗೆ ಪ್ರಿಂಟ್ ಬಿನಾಲೆ ಪ್ರಶಸ್ತಿ ಲಭಿಸಿರುವುದು ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕಲಾವಿದರ ಬಳಗ ಅಭಿನಂದಿಸಿದೆ.
