ಬೆಂಗಳೂರು: ಬೆಳಗಾವಿ ಅಧಿವೇಶನವನ್ನು ನ.30ರ ಬದಲು ಡಿ.2ರಿಂದ ಡಿ.11ರವರೆಗೆ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಕಳೆದ ಸಚಿವ ಸಂಪುಟ ಸಭೆಯಲ್ಲಿ ನ.30ರಿಂದ ಡಿ.11ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿ.2ರಿಂದ ಬೆಳಗಾವಿ ಅಧಿವೇಶನವನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಎರಡು ದಿನಗಳ ಕಾಲ ಅಧಿವೇಶನವನ್ನು ಕಡಿತಗೊಳಿಸಲಾಗಿದೆ.
ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ PPP ಮಾದರಿಯಲ್ಲಿ DBFOT ಆಧಾರದ ಮೇಲೆ ಬಹುಮಹಡಿ ವಾಹನ ನಿಲುಗಡೆ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಅನುಮೋದನೆ.
ಐತಿಹಾಸಿಕ ಹಾಗೂ ಪುರಾತತ್ವ ಮಹತ್ವವುಳ್ಳ ಪ್ರಾಚೀನ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ ಸನ್ನತಿಯ ಅಭಿವೃದ್ಧಿಗಾಗಿ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2026ಕ್ಕೆ ಅಸ್ತು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಬೆಂಗಳೂರು ಟರ್ಫ್ ಕ್ಲಬ್ಗೆ ನೀಡಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ನಾಲ್ಕು ಎಕರೆ ಜಾಗದ ಗುತ್ತಿಗೆ ಅವಧಿ (30 ವರ್ಷ) ಮತ್ತು ಗುತ್ತಿಗೆ ಮೊತ್ತವನ್ನು ಪರಿಷ್ಕರಿಸಲು ಅಸ್ತು.
KSHIP-IV ಯೋಜನೆ ಅಡಿಯಲ್ಲಿ 10 ರಸ್ತೆಗಳ ಒಟ್ಟಾರೆ 780.20 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನೆರವಿನೊಂದಿಗೆ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಒಪ್ಪಿಗೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ IEC ಚಟುವಟಿಕೆಗಳ 28.01 ಕೋಟಿ ರೂ. ವೆಚ್ಚದ ಸಮಗ್ರ ಕ್ರಿಯಾ ಯೋಜನೆಗೆ ಅನುಮೋದನೆ.
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಹಾಗೂ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಒಟ್ಟು 40 ಕೋಟಿ ರೂ. ಅಂದಾಜು ವೆಚ್ಚದಲ್ಲಿ Robotic Surgery ಉಪಕರಣ ಖರೀದಿಗೆ ಆಡಳಿತಾತ್ಮಕ ಅನುಮೋದನೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿವತಿಯಿಂದ ಟಿ.ಕೆ.ಹಳ್ಳಿಯಲ್ಲಿರುವ ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ 1ನೇ ಘಟ್ಟದಲ್ಲಿನ 400 ಎಂಎಲ್ಡಿ ಜಲಶುದ್ದೀಕರಣ ಘಟಕದ 5 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆಯ (O&M)ಯ 35.58 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಒಪ್ಪಿಗೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಟಿ.ಕೆ. ಹಳ್ಳಿ ಹಾರೋಹಳ್ಳಿ ತಾತಗುಣಿಯಲ್ಲಿರುವ ಕಾವೇರಿ ಮತ್ತು ನೀರು ಸರಬರಾಜು ಯೋಜನೆ 4ನೇ ಹಂತ 2ನೇ ಘಟ್ಟದ 550 ಎಂ.ಎಲ್.ಡಿ. ಸಾಮರ್ಥ್ಯದ ಜಲರೇಚಕ ಯಂತ್ರಗಾರಗಳು (Pumping Stations) ಮತ್ತು ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿರುವ 220ಕೆವಿ/ 66ಕೆವಿ/11ಕೆವಿ ಉಪಕೇಂದ್ರಗಳ 05 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ಕಾಮಗಾರಿಗಳನ್ನು ರೂ.84.47 ಕೋಟಿಗಳ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಧರ್ಮಪುರ ಕೆರೆಯಿಂದ ಹಲಗಲದ್ದಿ, ಮದ್ದಿಹಳ್ಳಿ, ಖಂಡೇನಹಳ್ಳಿ, ಬೇತೂರು ಮತ್ತು ಇತರ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಕಾಮಗಾರಿಯನ್ನು 35 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಒಪ್ಪಿಗೆ.
