ಅಪರಾಧ ಸುದ್ದಿ

BREAKING NEWS : ಪತ್ನಿ ಮೇಲಿನ ಸಿಟ್ಟಿಗೆ ಒಂದೇ ಕುಟುಂಬದ ಏಳು ಜನರ ಕೊಲೆ

Share It

ಬೆಂಗಳೂರು: ಪತ್ನಿ ಮೇಲಿನ ಸಿಟ್ಟಿಗೆ ಕುಟುಂಬಸ್ಥರ ಮೇಲೆ ಕ್ರೌರ್ಯ ಮೆರೆದಿರುವ ಆರೋಪಿಯೊಬ್ಬ ಏಳು ಜನರನ್ನು ಕೊಲೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ನಗರದ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿಯಿರುವ ಮನೆಯಲ್ಲಿ ಏಳು ಜನರ ಶವಗಳು ಪತ್ತೆಯಾಗಿದ್ದು, ಆರೋಪಿಯನ್ನು ಕ್ಯಾಬ್ ಚಾಲಕ ಶೇಖರ್ ಎಂದು ಹೇಳಲಾಗಿದೆ. ಆತ ಶವಗಳನ್ನೆಲ್ಲ ಚಿಕ್ಕಬಳ್ಳಾಪುರದ ನಂದಿಬೆಟ್ಟದ ಬಳಿ ಎಸೆದಿದ್ದ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.

ಮನೆಯಲ್ಲಿದ್ದ ಒರಳು ಕಲ್ಲಿನಿಂದ ಎಲ್ಲರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದ್ದು, ಎರಡು ದಿನದ ಅಂತರದಲ್ಲಿ ಪತ್ನಿಯ ಮನೆಯವರನ್ನೆಲ್ಲ ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿಕೊಂಡು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ಪತ್ನಿ ಸುನೀತಾ, ಅತ್ತೆ ರೂಪವತಿ ಹಾಗೂ ಅವರ ಇಬ್ಬರು ಪುತ್ರರಾದ ಶಿವಕುಮಾರ್ ಮತ್ತು ಶಂಕರ್ ಹಾಗೂ ಅವರ ಪತ್ನಿಯರಾದ ದಿವ್ಯಾ, ನಳಿನಿ ಹಾಗೂ ಶಿವಕುಮಾರ್ ಪುತ್ರ ಪುನೀತ್ ನನ್ನು ಆರೋಪಿ ಕೊಲೆ ಮಾಡಿದ್ದಾನೆ.

ಕೊಲೆಯಾದ ನಳಿನಿಯ ತಾಯಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ವಿಚಾರಣೆ ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಈ ಸ್ಫೋಟಕ ಮಾಹಿತಿ ಸಿಕ್ಕಿದೆ. ವಿಚಾರಣೆ ನಡೆಸಿದಾಗ ನಳಿನಿ ಸೇರಿ ಇಡೀ ಕುಟುಂಬವನ್ನೇ ಶೇಖರ್ ಕೊಲೆ ಮಾಡಿ, ನಂದಿಬೆಟ್ಟದ ತಪ್ಪಲಿನಲ್ಲಿ ಶವಗಳನ್ನು ಬಿಸಾಡಿರುವ ಘಟನೆ ನಡೆದಿದೆ. ರಾಜಾಜಿನಗರದಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Share It

You cannot copy content of this page