ಬೆಂಗಳೂರು: ಭಾರತದ ಮಾಜಿ ಆಟಗಾರ ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ನಿವಾಸಕ್ಕೆ ಕಳ್ಳರು ನುಗ್ಗಿದ್ದು, ಅವರು ಒಲಂಪಿಕ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿದ್ದ ಚಿನ್ನದ ಪದಕಗಳನ್ನು ಕದ್ದು ಪರಾರಿಯಾಗಿದ್ದಾರೆ.
ಎಚ್‌ಎಎಲ್ ಮೂರನೇ ಹಂತದಲ್ಲಿರುವ ಸೋಮಯ್ಯ ಅವರ ಮನೆಯಲ್ಲಿ ಅಕ್ಟೋಬರ್ 28ರರಾತ್ರಿ 2.30ರ ಸುಮಾರಿನಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ನಾಲ್ಕು ಅಂತಾರಾಷ್ಟ್ರೀಯ ಪದಕಗಳು ಸೇರಿದಂತೆ 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.
ಸೋಮಯ್ಯ ಅವರು 1980ರಲ್ಲಿ ಮಾಸ್ಕೋ ಒಲಂಪಿಕ್ ನಲ್ಲಿ ಚಿನ್ನ ಗೆದ್ದ ಹಾಕಿ ತಂಡದ ಭಾಗವಾಗಿದ್ದರು. ಜತೆಗೆ 1982ರ ದೆಹಲಿ ಕ್ರೀಡಾಕೂಟದ ಬೆಳ್ಳಿ, 1986ರ ಸಿಯೋಲ್ ಕ್ರೀಡಾಕೂಟದ ಕಂಚು, 1982ರ ಚಾಂಪಿಯನ್ಸ್ ಕ್ರೋಪಿಯ ಕಂಚು ಸಹ ಸೇರಿದ್ದವು ಎಂದು ತಿಳಿದುಬಂದಿದೆ.
ಪದಕಗಳ ಜತೆಗೆ 30 ಸಾವಿರ ರುಪಾಯಿ ನಗದನ್ನು ಕಳ್ಳರು ದೋಚಿದ್ದು, ಸೋಮಯ್ಯ ಕುಟುಂಬಸ್ಥರು ಹೊರಗೆ ಹೋಗಿದ್ದನ್ನು ನೋಡಿಕೊಂಡು ಕೃತ್ಯ ಎಸಗಿದ್ದಾರೆ. ಹೆಲ್ಮೆಟ್ ಧರಿಸಿದ್ದ ಕಳ್ಳರು, ಬೆಳಗಿನ ಜಾವದಲ್ಲಿ ಮನೆಗೆ ನುಗ್ಗಿರುವುದು ಅಕ್ಕಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
