ಚಿತ್ರದುರ್ಗ: ಲೇಖಕ ರವಿ ಹಂಜ್ ಪುಸ್ತಕಕ್ಕೆ ‘ಬಸವ ಮಂಟಪ’ ಎಂಬ ಹೆಸರಿಟ್ಟು ಬಸವಣ್ಣನವರನ್ನು ಅವಮಾನಿಸುವ ರೀತಿಯಲ್ಲಿ ಪೂರ್ವಗ್ರಹ ಪೀಡಿತವಾಗಿ ಕೃತಿ ರಚಿಸಿರುವುದು ಕ್ಷಮಿಸಲಾರದ ಅಪರಾಧವಾಗಿದ್ದು, ಸರ್ಕಾರ ತಕ್ಷಣವೇ ಆ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃತಿ ಬಿಡುಗಡೆ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಹಾಗೂ ಶ್ರೀ ಸರ್ಪಭೂಷಣ ಸ್ವಾಮೀಜಿ ಭಾಗವಹಿಸಿದ್ದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಆ ಕಾರ್ಯಕ್ರಮಕ್ಕೆ ನನಗೂ ಆಹ್ವಾನವಿತ್ತು. ಆದರೆ ಪುಸ್ತಕದಲ್ಲಿ ಏನಿದೆ ಎಂಬುದನ್ನು ಪೂರ್ಣವಾಗಿ ಓದದೆ ಕಾರ್ಯಕ್ರಮಕ್ಕೆ ಹೋದವರ ಬಗ್ಗೆ ಮಾತನಾಡುವುದಕ್ಕಿಂತ, ಪೂರ್ವಗ್ರಹ ಪೀಡಿತ ಉದ್ದೇಶದಿಂದ ಕೃತಿ ಬರೆದವರ ಬಗ್ಗೆ ಮಾತನಾಡುವುದು ಸೂಕ್ತ. ಈ ಕೃತಿಯಿಂದ ಲಕ್ಷಾಂತರ ಜನರ ಭಾವನೆ ಮತ್ತು ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಕೂಡಲೇ ಕೃತಿಯನ್ನು ಹಿಂಪಡೆಯಬೇಕು” ಎಂದರು.
ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆ ರದ್ದತಿಗೆ ವಿರೋಧ: ನಮ್ಮ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಚಿತ್ರದುರ್ಗದಿಂದಲೇ ಆರಂಭವಾದ ಮತಾಂತರ ನಿಷೇಧ ಕಾಯ್ದೆಯನ್ನು ಹಾಲಿ ಸರ್ಕಾರ ಹಿಂಪಡೆಯಲು ಹೊರಟಿರುವುದು ಸಮಾಜದಲ್ಲಿ ಮತ್ತೆ ಕ್ಷೋಭೆ ಉಂಟುಮಾಡಲಿದೆ ಎಂದು ಅವರು ಎಚ್ಚರಿಸಿದರು. “ಗೋಹತ್ಯೆ ನಿಷೇಧ ಕಾನೂನು ಬಂದ ಮೇಲೆ ಸಾಕಷ್ಟು ಗೋಹತ್ಯೆ ನಿಂತಿದೆ. ಗೋವುಗಳನ್ನು ರಕ್ಷಿಸಬೇಕಾದ ಸರ್ಕಾರವೇ ಗೋಹತ್ಯೆಗೆ ಪ್ರಚೋದನೆ ನೀಡುವುದು ಮತ್ತು ಒಂದು ಧರ್ಮದ ಭಾವನೆಗಳಿಗೆ ಧಕ್ಕೆ ತರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು” ಎಂದು ಒತ್ತಾಯಿಸಿದರು.
ಹಿರಿಯೂರು ಭೇಟಿ ಮತ್ತು ಭದ್ರಾ ಮೇಲ್ದಂಡೆ ಯೋಜನೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನಾಲ್ಕನೇ ಬಾರಿಗೆ ಹಿರಿಯೂರಿಗೆ ಭೇಟಿ ನೀಡುತ್ತಿರುವುದನ್ನು ಟೀಕಿಸಿದ ಅವರು, “ಉಪಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಕೇವಲ ಹಿರಿಯೂರಿಗೆ ಸೀಮಿತಗೊಳಿಸಿ ಸುಳ್ಳು ಆಶ್ವಾಸನೆಗಳನ್ನು ನೀಡಲಾಗುತ್ತಿದೆ. ಇದರಿಂದ ಕ್ಷೇತ್ರಕ್ಕೆ ಯಾವುದೇ ಪ್ರಯೋಜನವಿಲ್ಲ” ಎಂದರು.
ಇದೇ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ ಬಿಡುಗಡೆ ಕುರಿತು ಮಾತನಾಡಿ, “ಸಿಡಬ್ಲ್ಯೂಸಿ ಅನುಮೋದನೆ ಬಂದ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಹಣಕಾಸು ಸಚಿವರು ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಭೇಟಿಯ ನಂತರವೂ ಈ ಬಗ್ಗೆ ಸಭೆ ನಡೆಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗ 6,000 ಕೋಟಿ ರೂ. ಅನುದಾನ ಮಂಜೂರಾಗಿ ಬಿಡುಗಡೆಯಾಗುವ ವಿಶ್ವಾಸವಿದೆ” ಎಂದು ತಿಳಿಸಿದರು.
ಕಾವೇರಿ ನೀರು ಹಂಚಿಕೆ: ಕಾವೇರಿ ವಿವಾದದ ಕುರಿತು ಕೇಳಿದ ಪ್ರಶ್ನೆಗೆ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ರಾಜ್ಯದ ಜಲಾನಯನ ಪ್ರದೇಶದಲ್ಲಿ ಬರಗಾಲವಿದ್ದು, ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಲಿದೆ. ಡಿಸೆಂಬರ್ ಬಂದರೂ ತಮಿಳುನಾಡಿಗೆ 2,000 ಕ್ಯೂಸೆಕ್ ನೀರು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸರಿಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಪಕ್ಷದ ಅಧ್ಯಕ್ಷರ ಆಯ್ಕೆ: ಬಿಜೆಪಿ ರಾಜ್ಯಾಧ್ಯಕ್ಷರ ಮುಂದುವರಿಕೆ ಕುರಿತ ಎಂ.ಪಿ. ರೇಣುಕಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, “ಈ ವಿಚಾರ ಸದ್ಯ ಹೈಕಮಾಂಡ್ ಅಂಗಳದಲ್ಲಿದ್ದು, ವರಿಷ್ಠರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಂದು ಉತ್ತರಿಸಿದರು.
