ಕ್ರೀಡೆ ಸುದ್ದಿ

ಟ್ರೋಲ್ ಮತ್ತು ಟ್ರೆಂಡ್‌ನಲ್ಲಿ ಚೆನ್ನೈ-ಆರ್‌ಸಿಬಿ ಪಂದ್ಯ: ಸೋಷಿಯಲ್ ಮೀಡಿಯಾದಲ್ಲಿ ಜಿದ್ದಾಜಿದ್ದಿ

Share It


ಬೆಂಗಳೂರು: ಮೇ.18 ರ ನಿರ್ಣಾಯಕ ಪಂದ್ಯವನ್ನಾಡಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೆಂಗಳೂರಿಗೆ ಆಗಮಿಸಿದ್ದು, ಈ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಬಿಸಿಬಿಸಿ ಚರ್ಚೆ ರಂಗೇರಿದೆ.

ಬೆಂಗಳೂರಿಗೆ ಚೆನ್ನೈ ತಂಡ ಆಗಮಿಸುತ್ತಿರುವ ಫೋಟೋ ಅಪ್‌ಲೋಡ್ ಮಾಡಿದ ಚೆನ್ನೈ ತಂಡದ ಎಕ್ಸ್ ಖಾತೆಗೆ ಆರ್‌ಸಿಬಿಯಿಂದಲೇ ಉತ್ತರ ಆರಂಭವಾಗಿದೆ. ಇನ್ನೂ ಅಭಿಮಾನಿಗಳು ಕೇಳಬೇಕಾ? ಅದರಲ್ಲೂ ಚೆನ್ನೈ ಮತ್ತು ಬೆಂಗಳೂರು ನಡುವಿನ ಪಂದ್ಯ ಎಂದರೆ ಅದು ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ಎನಿಸಿಕೊಂಡಿದೆ. ಹೀಗಾಗಿ, ಟ್ರೋಲ್, ಅಂಕಿ-ಅಂಶ, ಸೋಲು ಗೆಲುವಿನ ಲೆಕ್ಕಾಚಾರ ಮಾಮೂಲಿನಂತೆ ನಡೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ಮಹೇಂದ್ರ ಸಿಂಗ್ ದೋನಿ ಅವರ ಬ್ಯಾಟಿಂಗ್ ಅಂಕಿ-ಅಂಶ, ಮೇ 18 ರಂದೇ ನಡೆದ ಕಳೆದ ಆವೃತ್ತಿಗಳ ಪಂದ್ಯಗಳಲ್ಲಿ ಗೆದ್ದ ಎಲ್ಲ ಸೀಸನ್‌ನಲ್ಲಿ ಆರ್‌ಸಿಬಿ ಫೈನಲ್ ಪ್ರವೇಶ ಮಾಡಿದೆ ಎಂಬಿತ್ಯಾದಿ ಅಂಕಿ-ಅಂಶಗಳ ಜತೆಗೆ ಪರಸ್ಪರ ಟ್ರೋಲ್ ಮಾಡಿಕೊಳ್ಳುವ, ಅಭಿಮಾನಿಗಳು ಒಬ್ಬರನ್ನೊಬ್ಬರು ಛೇಡಿಸುವ ಪ್ರವೃತ್ತಿ ಜೋರಾಗಿದೆ.

ಈ ನಡುವೆ ಶನಿವಾರ ನಡೆಯುವ ಪಂದ್ಯಕ್ಕೆ ಮಳೆಯ ಭೀತಿಯಿದ್ದು, ಮಳೆ ಬಾರದಿರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಎರಡು ತಂಡಗಳು ಈಗಾಗಲೇ ಅಭ್ಯಾಸ ಶುರು ಮಾಡಿದ್ದು, ಮಹೇಂದ್ರ ಸಿಂಗ್ ದೋನಿ ಮತ್ತು ವಿರಾಟ್ ಕೋಹ್ಲಿ ಇಬ್ಬರೂ ಬೌಲಿಂಗ್ ಅಭ್ಯಾಸ ಮಾಡುವ ಚಿತ್ರಗಳು ವೈರಲ್ ಆಗಿವೆ.

2013 ರ ಇದೇ ಮೇ 18 ರಂದು ಚೆನ್ನೈ ಮತ್ತು ಬೆಂಗಳೂರು ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯಕ್ಕೆ ಕೂಡ ಮಳೆ ಕಾಟ ಕೊಟ್ಟಿತ್ತು. ಈ ಕಾರಣದಿಂದ ಪಂದ್ಯವನ್ನು ಎಂಟು ಓವರ್‌ಗಳಿಗಷ್ಟೇ ಸೀಮಿತಗೊಳಿಸಲಾಗಿತ್ತು. ಆ ಪಂದ್ಯದಲ್ಲಿ ಆರ್‌ಸಿಬಿ ತಂಡ 106 ರನ್ ಗಳಿಸಿದ್ದರೆ, ಚೆನ್ನೈ ತಂಡ 82 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು. ಆರ್‌ಸಿಬಿ 24 ರನ್‌ಗಳ ಅಂತರದಿಂದ’ ಗೆಲುವು ಸಾಧಿಸಿತ್ತು. ಈ ಎಲ್ಲ ಅಂಕಿ-ಅಂಶಗಳನ್ನಿಟ್ಟುಕೊಂಡು ನೆಟ್ಟಿಗರು ತಮ್ಮ ತಮ್ಮ ವಾದ ಮಂಡಿಸುತ್ತಿದ್ದಾರೆ.


Share It

You cannot copy content of this page