ಅಪರಾಧ ಸುದ್ದಿ

ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದವರು ಸ್ಮಶಾನಕ್ಕೆ

Share It

ಕೊಪ್ಪಳ: ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುತ್ತಿದ್ದ ಟ್ರ‍್ಯಾಕ್ಟರ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಐವರು ಮೃತಪಟ್ಟಿರುವ ಘಟನೆ ಕುಷ್ಠಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಹಿಂದಿನಿಂದ ಬಂದ ಖಾಸಗಿ ಬಸ್ ಟ್ರ‍್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದು, 14 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಗಂಗಾವತಿ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ಸಾವನ್ನಪ್ಪುವ ಮೂಲಕ ಸತ್ತವರ ಸಂಖ್ಯೆ ಐದಕ್ಕೇರಿದೆ.

ಶುಕ್ರವಾರ ಸಂಜೆ ನಡೆದ ಅಪಘಾತದಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಬಸವರಾಜ (22), ತೇಜಸ್ (22), ದುರುಗಮ್ಮ (65) ಹಾಗೂ ಗದಗ ಜಿಲ್ಲೆ ತಿಮ್ಮಾಪುರ ಗ್ರಾಮದ ಕೊಂಡಪ್ಪ (60) ಎಂದು ಗುರುತಿಸಲಾಗಿದೆ.

ಕರಮುಡಿ ಗ್ರಾಮದಿಂದ ಶಿವಪ್ಪ ಎಂಬುವರು ಸಂಬಂಧಿಕರೊಡಗೂಡಿ ೩೦ ಜನರು ಗುರುವಾರ ಕೊಪ್ಪಳ ತಾಲೂಕಿನ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಟ್ರ‍್ಯಾಕ್ಟರ್‌ನಲ್ಲಿ ಬಂದಿದ್ದರು. ದೇವಸ್ಥಾನಕ್ಕೆ ಬಂದು ಶುಕ್ರವಾರ ಹರಕೆ ತೀರಿಸಿ ವಾಪಸ್ ಊರಿಗೆ ಮರಳುತ್ತಿದ್ದರು. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿದೆ.

ಗಾಯಗೊಂಡಿರುವ 14 ಜನರನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ 65 ವರ್ಷದ ದುರುಗಮ್ಮ ಅಸುನೀಗಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page