ಉದಕಮಂಡಲ: ಊಟಿ ಪ್ರವಾಸದ ಫ್ಲಾನ್ ಯಾರಾದ್ರೂ ಮಾಡಿಕೊಂಡಿದ್ರೆ, ಇನ್ನೂ ಮೂರು ದಿನ ಬ್ರೇಕ್ ಹಾಕ್ಲೇಬೇಕು. ಕಾರಣ ನೀಲಗಿರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಪ್ರವಾಸಿಗರು ಬರದಂತೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಊಟಿಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಇನ್ನು ಮುಂದಿನ ಮೂರು ದಿನಗಳ ಕಾಲ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ, ನೀಲಗಿರಿ ಜಿಲ್ಲಾಧಿಕಾರಿ ಅರುಣಾ ಅವರು, ಮೂರು ದಿನಗಳ ಅವಧಿಯಲ್ಲಿ ಊಟಿ ಪ್ರವಾಸವನ್ನು ರದ್ದು ಮಾಡಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದಾರೆ.
ಊಟಿಯಲ್ಲಿ ಕಳೆದ ವಾರ ಅತ್ಯಧಿಕ ತಾಪಮಾನ ದಾಖಲಾಗಿತ್ತು. ಗರಿಷ್ಠ ೨೯ ಡಿಗ್ರಿ ದಾಖಲಾಗಿದ್ದ ಉಷ್ಣಾಂಶ ಊಟಿಯಲ್ಲಿ ಈವರೆಗೆ ದಾಖಲಾಗಿರುವ ಅತ್ಯಧಿಕ ಗರಿಷ್ಠ ತಾಪಮಾನವಾಗಿದೆ. ಈ ಹಿಂದೆ ೮೦ರ ದಶಕದಲ್ಲಿ ೨೬ ಡಿಗ್ರಿ ತಲುಪಿದ್ದೆ ಈವರೆಗಿನ ದಾಖಲೆಯ ಉಷ್ಟಾಂಶವಾಗಿತ್ತು. ಜನವರಿಯಲ್ಲಿ ಕನಿಷ್ಠ ಉಷ್ಣಾಂಶ ಶೂನ್ಯವನ್ನು ತಲುಪಿತ್ತು. ಆ ಮೂಲಕ ಊಟಿಯ ಉಷ್ಣಾಂಶದಲ್ಲಿ ಸಆಕಷ್ಟು ವ್ಯತ್ಯಯಗಳಾಗುತ್ತಿವೆ.
ಇಂತಹ ಉಷ್ಣಾಂಶಗಳ ವ್ಯತ್ಯಯದಿಂದಾಗಿ ಭಾರಿ ಮಳೆ ಸುರಿಯುತ್ತಿದೆ. ಮೂರು ದಿನಗಳ ಕಾಲ ನೀಲಗಿರಿ ಜಿಲ್ಲೆಗೆ ಯೆಲ್ಲೋ ಅಲೆರ್ಟ್ ಘೋಷಣೆ ಮಾಡಲಾಗಿದೆ. ಜಲಪಾತಗಳಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಊಟಿ ಪ್ರವಾಸಕ್ಕೆ ಬರದಿರುವುದು ಕ್ಷೇಮ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಹೀಗಾಗಿ, ಊಟಿ ಕಡೆಗೆ ಹೋಗುವ ಯೋಜನೆಯೇನಾದರೂ ಇದ್ದರೆ, ಸಧ್ಯಕ್ಕೆ ಅದನ್ನು ಮುಂದೂಡಿ.