ಬೆಂಗಳೂರು: ಕರ್ನಾಟಕದ ಗಡಿ ಹಂಚಿಕೊಂಡಿರುವ 4 ರಾಜ್ಯಗಳಲ್ಲಿ ಆನೆಗಳ ವಿಶೇಷ ಗಣತಿ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ.
ಪ್ರತಿ 5 ವರ್ಷಕ್ಕೊಮ್ಮೆ ಆನೆಗಳ ಗಣತಿ ನಡೆಯುತ್ತದೆ. ಆದರೆ ಇದೇ ಮೊದಲ ಬಾರಿಗೆ ರಾಜ್ಯದ ಗಡಿ ಭಾಗದಲ್ಲಿ ಮಾತ್ರ ಆನೆಗಳ ಗಣತಿ ನಡೆಯುತ್ತಿದೆ. ಮೇ 23 ರಿಂದ ಮೇ 25 ರವರೆಗೆ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಗಡಿಗಳಲ್ಲಿ ಆನೆಗಳ ಗಣತಿ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಆನೆಗಳ ಗಣತಿ ಉದ್ದೇಶ ಈ ಕಾರಣಕ್ಕೆ…
ಕರ್ನಾಟಕದಲ್ಲಿ ರೇಡಿಯೋ ಕಾಲರ್ ಅಳವಡಿಕೆ ಮಾಡಿದ್ದ ಆನೆ ವೈನಾಡಿನಲ್ಲಿ ವ್ಯಕ್ತಿಯೊಬ್ಬರನ್ನು ಕೊಂದು ಹಾಕಿತ್ತು. ಹಾಸನದಲ್ಲಿ ಹಿಡಿದು ರೇಡಿಯೋ ಕಾಲರ್ ಹಾಕಿದ್ದ ಈ ಆನೆಯು ವೈನಾಡಿಗೆ ಹೋಗಿತ್ತು. ಆನೆಗಳ ವಲಸೆ ತಡೆಯುವುದು, ಆನೆ-ಮಾನವ ಸಂಘರ್ಷ ತಪ್ಪಿಸಲು ಕ್ರಮಗಳನ್ನು ಕೈಗೊಳ್ಳಲು ಅಂತಾರಾಜ್ಯ ಗಡಿಯಲ್ಲಿ ಆನೆಗಳ ವಿಶೇಷ ಗಣತಿ ಮಾಡಲು 2024 ರ ಮಾರ್ಚ್ ನಲ್ಲಿ ಬಂಡೀಪುರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಅಂತಾರಾಜ್ಯ ಗಡಿ ಭಾಗದಲ್ಲಿ ಆನೆಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತಿದೆ.
ಆನೆ ಗಣತಿ ಕಾರ್ಯ ಹೀಗೆ…
ಮೇ 23 ರಂದು ಆನೆಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ. ಟ್ರಾನ್ಸಿಟ್ ಮಾದರಿಯಲ್ಲಿ ಮೇ 24 ರಂದು ಆನೆ ಗಣತಿ ನಡೆಯಲಿದೆ. ಮೇ 25 ರಂದು ವಾಟರ್ ಹೋಲ್ ಕೌಂಟ್ ಮೂಲಕ ಆನೆಗಳ ಗಣತಿ ನಡೆಯಲಿದೆ. ರೇಡಿಯೋ ಕಾಲರ್ ಹಾಕಿರುವ ಆನೆಗಳನ್ನು ಸುಲಭವಾಗಿ ಗುರುತಿಸಲಾಗುತ್ತದೆ. ಕಾಡಾನೆಗಳನ್ನು ಮಾತ್ರ ಗಣತಿ ಮಾಡಲಾಗುತ್ತದೆ. ರಾಜ್ಯದಲ್ಲಿ ಕೋಲಾರ, ಬನ್ನೇರುಘಟ್ಟ, ರಾಷ್ಟ್ರೀಯ ಉದ್ಯಾನ, ಕಾವೇರಿ ವನ್ಯಜೀವಿಗಳ ತಾಣ, ಮಲೆ ಮಹದೇಶ್ವರ ಬೆಟ್ಟ, ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಕೊಡಗು-ಕೇರಳ ಗಡಿಯಲ್ಲಿ ಆನೆ ಗಣತಿ ನಡೆಯಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.