ರಾಜಕೀಯ ಸುದ್ದಿ

ಪ್ರಧಾನಿ ಮೋದಿ ಸಮ್ಮುಖದಲ್ಲಿಆಂಧ್ರಪ್ರದೇಶ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ ಸ್ವೀಕಾರ

Share It

ವಿಜಯವಾಡ: ಟಿಡಿಪಿ ಮುಖ್ಯಸ್ಥ ಎನ್​. ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಮಂಗಳವಾರ ರಾಜ್ಯಪಾಲ ಅಬ್ದುಲ್ ನಜೀರ್ ಅವರು ಚಂದ್ರಬಾಬು ನಾಯ್ಡು ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ವ್ಯಾಪಕ ಭದ್ರತೆ ಕಲ್ಪಿಸಲಾಗಿತ್ತು. ಮೂರು ಪಕ್ಷಗಳ ಒಂದಕ್ಕಿಂತ ಹೆಚ್ಚು ಲಕ್ಷ ಕಾರ್ಯಕರ್ತರು ಮತ್ತು ಕೇಡರ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಆಂಧ್ರಪ್ರದೇಶ ಸರ್ಕಾರದ ಸಚಿವರಾಗಿ ನಟ ಪವನ್ ಕಲ್ಯಾಣ್​ ಪ್ರಮಾಣವಚನ ಸ್ವೀಕರಿಸಿದರು.

ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಸಿಎಂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಸೇರಿದಂತೆ 22 ಮಂದಿ ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 11 ರಂದು ಮಂಗಳವಾರ ನಡೆದ ಪ್ರತ್ಯೇಕ ಸಭೆಗಳಲ್ಲಿ ತೆಲುಗು ದೇಶಂ ಶಾಸಕಾಂಗ ಪಕ್ಷ ಮತ್ತು ಎನ್‌ಡಿಎ ಪಾಲುದಾರರು ನಾಯ್ಡು ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದರು.

ಈ ಬಾರಿಯ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 175 ಸ್ಥಾನಗಳ ಪೈಕಿ 135 ಸ್ಥಾನಗಳನ್ನು ಗೆದ್ದ ಟಿಡಿಪಿ ಸಂಪೂರ್ಣ ಬಹುಮತ ಸಾಧಿಸಿದೆ. ಟಿಡಿಪಿ ಜೊತೆಗೆ ನಟ ಪವನ್ ಕಲ್ಯಾಣ್ ನೇತೃತ್ವದ ಮಿತ್ರ ಪಕ್ಷ ಜನ ಸೇವಾ ಪಕ್ಷ ಸ್ಪರ್ಧಿಸಿದ್ದ 21 ಕ್ಷೇತ್ರಗಳಲ್ಲೂ ದಿಗ್ವಿಜಯ ಸಾಧಿಸಿದೆ. ಇದೇ ರೀತಿ ಟಿಡಿಪಿಯ ಮತ್ತೊಂದು ಮಿತ್ರ ಪಕ್ಷ ಬಿಜೆಪಿಯಿಂದ ಸಹ 8 ಶಾಸಕರು ಆಯ್ಕೆಯಾಗಿದ್ದಾರೆ. ಒಟ್ಟಾರೆ ಆಂಧ್ರಪ್ರದೇಶ ರಾಜ್ಯದ 175 ಶಾಸಕರ ಬಲದ ವಿಧಾನಸಭೆಯಲ್ಲಿ ಟಿಡಿಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ 164 ಶಾಸಕರನ್ನು ಗೆಲ್ಲಿಸಿಕೊಂಡಿದೆ.

ಆದರೆ ಆಡಳಿತ ಪಕ್ಷವಾಗಿದ್ದ ನಿಕಟಪೂರ್ವ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷ ಕೇವಲ 11 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿ ಹೀನಾಯ ಸೋಲು ಅನುಭವಿಸಿದೆ‌‌. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷ ಮತ್ತು ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದ ಮಧ್ಯೆ ವೋಟ್ ಬ್ಯಾಂಕ್ ಛಿದ್ರವಾಗಿ ಸಲೀಸಾಗಿ ಮತ್ತೆ ಟಿಡಿಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೇರಲು ಸುವರ್ಣಾವಕಾಶ ಸಿಕ್ಕಿತು.

ಇಂದು ಎಲ್ಲಾ ನಿಗದಿಯಾದಂತೆ
ಆಂಧ್ರಪ್ರದೇಶ ರಾಜ್ಯದ ವಿಜಯವಾಡ ನಗರದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ ಎನ್.ಡಿ.ಎ ಸರ್ಕಾರದ ಒಟ್ಟು 24 ಸಚಿವರು ಪ್ರಮಾಣವಚನ ಸ್ವೀಕರಿಸಿದರು.

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಪ್ರಮಾಣ ವಚನ ಸ್ವೀಕರಿಸಿ 4ನೇ ಅವಧಿಗೆ ಆಂಧ್ರಪ್ರದೇಶ ಸಿಎಂ ಆಗಿ ಗದ್ದುಗೆ ಏರಿದರು. ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ‘ಪವರ್ ಸ್ಟಾರ್’ ಪವನ್ ಕಲ್ಯಾಣ್ ಅವರು ಸಂಪುಟ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ವಿಜಯವಾಡದ ಹೊರವಲಯದಲ್ಲಿ ನಡೆದ ಭವ್ಯ ಪ್ರಮಾಣ ವಚನ ಸಮಾರಂಭದಲ್ಲಿ, ಪವನ್ ಕಲ್ಯಾಣ್ ಅವರ ಜತೆ, ಚಂದ್ರಬಾಬು ನಾಯ್ಡು ಅವರ ಮಗ ಮತ್ತು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಸೇರಿದಂತೆ 23 ಮಂದಿ ಪ್ರಮಾಣ ವಚನ ಸ್ವೀಕರಿಸಿದರು. ಎನ್‌ಡಿಎ ಮೈತ್ರಿಕೂಟದ ಬಿಜೆಪಿ 8 ಸ್ಥಾನಗಳಲ್ಲಿ ಜಯಗಳಿಸಿತ್ತು. ಅವರಲ್ಲಿ ಆಂಧ್ರ ಪ್ರದೇಶ ಸಂಪುಟಕ್ಕೆ ಸತ್ಯಕುಮಾರ್ ಯಾದವ್ ಮಾತ್ರ ಸಚಿವರಾಗಿ ಆಯ್ಕೆಯಾಗಿದ್ದಾರೆ. ಜನಸೇನಾದ ಒಟ್ಟು ಮೂವರು ಶಾಸಕರು ಸಚಿವರಾಗಿ ಸಂಪುಟ ಸೇರಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ನಿರೀಕ್ಷೆ ಇದೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ, ನಟ ರಜನಿಕಾಂತ್, ಪವನ್ ಕಲ್ಯಾಣ್ ಅವರ ಅಣ್ಣ ಚಿರಂಜೀವಿ, ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳ್‌ಸಾಯಿ ಸೌಂದರರಾಜನ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಮಾಣವಚನದ ಬಳಿಕ ಆಂಧ್ರಪ್ರದೇಶ ನೂತನ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಅಪ್ಪಿಕೊಂಡು ಪ್ರಧಾನಿ ಮೋದಿ ಅವರು ಅಭಿನಂದಿಸಿದರು.

ಯಾವ ಸಮುದಾಯಕ್ಕೆ ಮನ್ನಣೆ?
ವಿಜಯವಾಡದ ಗನ್ನಾವರಂ ವಿಮಾನ ನಿಲ್ದಾಣದ ಸಮೀಪದ ಕೆಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಿತು. ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು ನಾಯ್ಡು ಸೇರಿದಂತೆ ಎಲ್ಲಾ 25 ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಆಂಧ್ರಪ್ರದೇಶ ರಾಜ್ಯ ಟಿಡಿಪಿ ಅಧ್ಯಕ್ಷ ಕೆ. ಅಚನ್ ನಾಯ್ಡು, ಜನಸೇನಾ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾಡೆಂದ್ಲಾ ಮನೋಹರ್, ರಾಜಮುಂಡ್ರಿ ಗ್ರಾಮೀಣ ಕ್ಷೇತ್ರದ ಜನಸೇನಾ ಶಾಸಕ ಕಂಡುಲಾ ದುರ್ಗೇಶ್ ಅವರಿಗೆ ಸಚಿವ ಸ್ಥಾನ ದೊರಕಿದೆ. 25 ಮಂದಿಯಲ್ಲಿ 17 ಸಚಿವರು ಹೊಸಬರಾಗಿದ್ದಾರೆ. ಮೂವರು ಮಹಿಳೆಯರು ಸಂಪುಟ ಸೇರಿದ್ದು, ಹಿರಿಯ ನಾಯಕ ಎನ್ ಮೊಹಮ್ಮದ್ ಫಾರೂಕ್ ಅವರು ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಮುಸ್ಲಿಂ ಸಚಿವರೆನಿಸಿದ್ದಾರೆ.

ಮಂತ್ರಿಮಂಡಲದಲ್ಲಿ 8 ಮಂದಿ ಹಿಂದುಳಿದ ವರ್ಗದವರು, 3 ಪರಿಶಿಷ್ಟ ಜಾತಿ ಹಾಗೂ ಒಬ್ಬ ಪರಿಶಿಷ್ಟ ಪಂಗಡದ ಸಚಿವರಿದ್ದಾರೆ. ಕಮ್ಮ ಹಾಗೂ ಕಾಪು ಸಮುದಾಯದ ತಲಾ ನಾಲ್ವರಿಗೆ, ರೆಡ್ಡಿ ಸಮುದಾಯದ ಮೂವರು, ವೈಶ್ಯ ಸಮುದಾಯದ ಒಬ್ಬರಿಗೆ ನಾಯ್ಡು ಸ್ಥಾನ ಕಲ್ಪಿಸಿದ್ದಾರೆ. ನಾಯ್ಡು ಅವರು ಸಾಮಾಜಿಕ ಹಾಗೂ ರಾಜಕೀಯವಾಗಿ ಪ್ರಬಲವಾಗಿರುವ ಕಮ್ಮ ಸಮುದಾಯಕ್ಕೆ ಸೇರಿದ್ದರೆ, ಪವನ್ ಕಲ್ಯಾಣ್ ಕಾಪು ಸಮುದಾಯದವರು.

ಗಮನಾರ್ಹ ಸಾಧನೆ ತೋರಿದ ಎನ್‌ಡಿಎ…
ಕೌಶಲ ಅಭಿವೃದ್ಧಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯವು ಕೆಲವು ತಿಂಗಳ ಹಿಂದೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿತ್ತು. ಜೈಲಿನಲ್ಲಿ ಕಳೆದ ಕೆಲವೇ ತಿಂಗಳ ಬಳಿಕ ನಾಯ್ಡು, ಗಮನಾರ್ಹ ಸಾಧನೆ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ.

175 ಸೀಟುಗಳ ಆಂಧ್ರ ವಿಧಾನಸಭೆಯಲ್ಲಿ ಟಿಡಿಪಿ, ಜನ ಸೇನಾ ಮತ್ತು ಬಿಜೆಪಿ ಜತೆಗೂಡಿ ಸ್ಪರ್ಧಿಸಿದ್ದವು. ಇದರಲ್ಲಿ ಟಿಡಿಪಿ 135, ಜನಸೇನಾ 21 ಹಾಗೂ ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಹಿಂದಿನ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಕೇವಲ 11 ಸ್ಥಾನಗಳಿಗೆ ಸೀಮಿತವಾಗಿತ್ತು.

2024 ರ ಚುನಾವಣೆಯಲ್ಲಿ ಪ್ರಚಂಡ ವಿಜಯದ ನಂತರ, ಚಂದ್ರಬಾಬು ನಾಯ್ಡು ಅವರು ವೈಎಸ್‌ಆರ್‌ಸಿಪಿಯನ್ನು ಹೊರಹಾಕುವ ಮೂಲಕ 4ನೇ ಅವಧಿಗೆ ಸಿಎಂ ಆಗಿ ಮರಳಿದ್ದಾರೆ. ಮುಖ್ಯಮಂತ್ರಿಯಾಗಿ ಅವರ ಮೊದಲ ಎರಡು ಅವಧಿಗಳು ಸಂಯುಕ್ತ ಆಂಧ್ರಪ್ರದೇಶದ ಚುಕ್ಕಾಣಿ ಹಿಡಿದಿದ್ದವು, ಇದು 1995 ರಲ್ಲಿ ಪ್ರಾರಂಭವಾಗಿ 2004 ರಲ್ಲಿ ಕೊನೆಗೊಂಡಿತು, ಆದರೆ 3ನೇ ಅವಧಿಯ ಆಡಳಿತ ತೆಲಂಗಾಣ ರಾಜ್ಯದ ಹೊರತಾದ ವಿಭಜಿತ ಆಂಧ್ರಪ್ರದೇಶ ರಾಜ್ಯದಲ್ಲಿ ಬಂದಿತ್ತು.

2014 ರಲ್ಲಿ ಚಂದ್ರಬಾಬು ನಾಯ್ಡು ವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದರು ಮತ್ತು 2019 ರವರೆಗೆ ಸೇವೆ ಸಲ್ಲಿಸಿದರು. ಅವರು 2019 ರ ಚುನಾವಣೆಯಲ್ಲಿ ಸೋತರು ಮತ್ತು 2024 ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು.


Share It

You cannot copy content of this page