2024 ನೇ ಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ನ ಸೂಪರ್-8 ರ ಗ್ರೂಪ್-2 ರ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಿದೆ.
ವೆಸ್ಟ್ ಇಂಡೀಸ್ ದೇಶದ ಸೇಂಟ್ ಲೂಸಿಯಾದ ಡಾರೆನ್ ಸ್ಯಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಜಾನ್ಸನ್ ಚಾರ್ಲ್ಸ್ ಹಾಗೂ ಬ್ರಾಂಡನ್ ಕಿಂಗ್ ಉತ್ತಮ ಆರಂಭ ಒದಗಿಸಿದರು.
ಇವರಿಬ್ಬರೂ ಮೊದಲ ವಿಕೆಟ್ಗೆ 94 ರನ್ ಪೇರಿಸಿದ ಬಳಿಕ ಚಾಲ್ಸ್ (38 ರನ್) ವಿಕೆಟ್ ಒಪ್ಪಿಸಿದರು. ಇನ್ನು 23 ರನ್ಗಳಿಸಿದ್ದ ಬ್ರಾಂಡನ್ ಕಿಂಗ್ ಗಾಯಗೊಂಡು ಮೈದಾನ ತೊರೆದರು. ಆರಂಭಿಕರಿಬ್ಬರ ನಿರ್ಗಮನದ ನಂತರ ವಿಂಡೀಸ್ ರನ್ ಗತಿಯು ಕುಸಿದತ್ತ ಸಾಗಿತು.
ಇಷ್ಟಾದರೂ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ (36 ರನ್) ಹಾಗೂ ರೋವ್ಮನ್ ಪೊವೆಲ್ (36 ರನ್) ಉಪಯುಕ್ತ ಕಾಣಿಕೆ ನೀಡಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 180 ರನ್ ಗಳ ಸವಾಲಿನ ಮೊತ್ತ ದಾಖಲಿಸಿತು
181 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಓಪನರ್ ಗಳಾದ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಸಿಡಿಲಬ್ಬರದ ಆರಂಭ ಒದಗಿಸಿದರು. ಪವರ್ ಪ್ಲೇನಲ್ಲಿ 58 ರನ್ ಕಲೆಹಾಕಿದ ಈ ಓಪನರ್ ಗಳು ಸವಾಲಿನ ಮೊತ್ತವನ್ನು ಚೇಸ್ ಮಾಡಲು ಅತ್ಯುತ್ತಮ ಅಡಿಪಾಯ ಹಾಕಿದರು.
ಈ ಹಂತದಲ್ಲಿ 25 ರನ್ ಗಳಿಸಿದ್ದ ಜೋಸ್ ಬಟ್ಲರ್ ಎಲ್.ಬಿ.ಡಬ್ಲ್ಯೂ ಆಗಿ ಔಟಾದರು. ಇದರ ಬೆನ್ನಲ್ಲೇ ಮೊಯೀನ್ ಅಲಿ (13 ರನ್) ಕೂಡ ಔಟಾದರು. ಇಷ್ಟಾದರೂ ಮತ್ತೊಂದೆಡೆ ಔಟಾಗದೇ ಉಳಿದಿದ್ದ ಓಪನರ್ ಫಿಲ್ ಸಾಲ್ಟ್ ಅಬ್ಬರ ಬ್ಯಾಟಿಂಗ್ ಮುಂದುವರೆದಿತ್ತು. ವಿಂಡೀಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಫಿಲ್ ಸಾಲ್ಟ್ 47 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳನ್ನು ಬಾರಿಸಿದರು. ಅಲ್ಲದೆ ಅಜೇಯ 87 ರನ್ ಸಿಡಿಸಿದರು.
ಮತ್ತೊಂದೆಡೆ ಜಾನಿ ಬೈರ್ಸ್ಟೋವ್ 26 ಎಸೆತಗಳಲ್ಲಿ 48 ರನ್ಗಳನ್ನು ಕಲೆಹಾಕಿದರು. ಈ ಮೂಲಕ ಇಂಗ್ಲೆಂಡ್ ತಂಡವು 17.3 ಓವರ್ಗಳಲ್ಲಿ ಗುರಿ ತಲುಪಿ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
ಮುಂದೆ ದಕ್ಷಿಣ ಆಫ್ರಿಕಾಕ್ಕೆ ಸೋತರೂ ಹೊಸ ತಂಡ ಅಮೆರಿಕಾ ತಂಡವನ್ನು ಸೋಲಿಸಿದರೆ ಸಾಕು ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗಲಿದೆ.

