ಬೆಂಗಳೂರು: ರಾಜ್ಯದ ಹವಾಮಾನ ಇಲಾಖೆಯಿಂದ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಕಲಬುರಗಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಜೂನ್ 22ರಿಂದ 24ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಜೊತೆ ಭೂ ಕುಸಿತದ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ಭಾಗಕ್ಕೆ ಜೂನ್ 23 ರಂದು ರೆಡ್ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ಅರ್ಧ ಗಂಟೆಯಿಂದ ಧಾರಾಕಾರ ಮಳೆ ಸುರಿದಿದೆ. 2 ರಿಂದ 3 ದಿನಗಳಿಂದ ಮರೆಯಾಗಿದ್ದ ವರುಣ ಇಂದು ಏಕಾಏಕಿ ಆರಂಭವಾದ ಮಳೆಗೆ ಜನಜೀವನ ಅಸ್ತವ್ಯಸ್ತ ಆಗಿದೆ.
2 ದಿನಗಳ ಕಾಲ ಬೆಂಗಳೂರಿನಲ್ಲಿ ಸಾಧಾರಣ ಮಳೆ: ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಇಂದು ಮತ್ತೆ ಎಂಟ್ರಿ ಕೊಟ್ಟಿದ್ದ. ನಾಗವಾರ, ಬಾಣಸವಾಡಿ, ರಿಂಗ್ ರಸ್ತೆ ಸೇರಿದಂತೆ ನಗರದ ಹಲವೆಡೆ ತುಂತುರು ಮಳೆ ಸುರಿದಿದೆ. ಇನ್ನೂ 2 ದಿನಗಳ ಕಾಲ ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಜೂನ್ 23 ರಿಂದ ರಾಜ್ಯಾದ್ಯಂತ ಮಳೆ ಚುರುಕುಗೊಳ್ಳಲಿದೆ.
ನೆಲಮಂಗಲ, ಪೀಣ್ಯ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಮಲ್ಲಸಂದ್ರ ಸೇರಿದಂತೆ ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಜೋರು ಮಳೆಗೆ ವಾಹನ ಸವಾರರಿಗೆ ಸಂಕಷ್ಟ ಎದುರಾಗಿತ್ತು. ಕೆಲಸ ಮುಗಿಸಿ ಮನೆಗೆ ತೆರಳಿದ್ದವರಿಗೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಜನರು ಛತ್ರಿ ಹಿಡಿದು ಹೋಗುತ್ತಿರುವುದು ಕಂಡುಬಂತು.
ಕೆಲ ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆರಾಯ ಇಂದು ಬಾಗಲಕೋಟೆಯಲ್ಲಿ ಅಬ್ಬರಿಸಿದ್ದ. ನವನಗರ, ವಿದ್ಯಾಗಿರಿ ಸೇರಿದಂತೆ ಹಲವೆಡೆ ಮಳೆ ಆಗಿದೆ. ಆ ಮೂಲಕ ಬಿತ್ತನೆ ಮಾಡಿದ್ದ ರೈತರ ಮುಖದಲ್ಲಿ ಸಂತಸ ಮೂಡಿತ್ತು.
ಅದೇ ರೀತಿಯಾಗಿ ಚಿಕ್ಕಮಗಳೂರಲ್ಲೂ ಗಾಳಿ ಸಹಿತ ಜೋರು ಮಳೆ ಆಗಿದೆ. ಚಾರ್ಮಾಡಿ ಫಾಟ್, ಬಾಳೂರು, ಬಣಕಲ್ ಭಾಗದಲ್ಲಿ ಮಳೆ ಸುರಿದಿದೆ. ಅರ್ಧ ಗಂಟೆ ಸುರಿದ ಮಳೆಗೆ ಚಾರ್ಮಾಡಿ ಫಾಟ್ನಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

