ಬಾರ್ಬಡೋಸ್: ವೆಸ್ಟ್ ಇಂಡೀಸ್ ದೇಶದ ಬಾರ್ಬಡೋಸ್ನ ಬ್ರಿಡ್ಜ್ಟೌನ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ-20 ವಿಶ್ವಕಪ್ ಕ್ರಿಕೆಟ್ ನ ಸೂಪರ್ 8 ಸುತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ 47 ರನ್ಗಳ ಅರ್ಹ ಗೆಲುವು ದಾಖಲಿಸಿದೆ.
ಈ ಮೂಲಕ 2024 ರ ಟಿ20 ವಿಶ್ವಕಪ್ನಲ್ಲಿ ಸತತ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ತನ್ನ ಅಜೇಯ ಜಯದ ಓಟವನ್ನು ಮುಂದುವರೆಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ ಸಿಡಿಸಿದ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು. 182 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಅಫ್ಘಾನ್ ತಂಡ ಬುಮ್ರಾ ದಾಳಿಗೆ ನಲುಗಿ ಪದೇ ಪದೇ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಅರ್ಧಶತಕ ಮತ್ತು ಹಾರ್ದಿಕ್ ಪಾಂಡ್ಯ ಅವರ ಜೊತೆಯಾಟದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪಂದ್ಯದ ಆರಂಭದಲ್ಲಿ ಓಪನರ್ ಗಳಿಂದ ಈ ಪಂದ್ಯದಲ್ಲೂ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಕೇವಲ 8 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆನಂತರ ಬಂದ ಪಂತ್ ತುಸು ವೇಗವಾಗಿ ಬ್ಯಾಟ್ ಬೀಸಿ 20 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಕಳೆದ 3 ಪಂದ್ಯಗಳಲ್ಲಿ ಒಂದಂಕಿಗೆ ಸುಸ್ತಾಗಿದ್ದ ವಿರಾಟ್ ಕೊಹ್ಲಿ, ಈ ಪಂದ್ಯದಲ್ಲಿ 24 ರನ್ ಬಾರಿಸಿದರಾದರೂ ಅದಕ್ಕಾಗಿ 24 ಎಸೆತಗಳನ್ನು ತೆಗೆದುಕೊಂಡರು.
ಆದರೆ ಸೂರ್ಯಕುಮಾರ್ ಯಾದವ್-ಹಾರ್ದಿಕ್ ಪಾಂಡ್ಯ ಮಹತ್ವದ ಜೊತೆಯಾಟದ ಮೂಲಕ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 53 ರನ್ ಗಳಿಸಿ ಔಟಾದರು. ಇವರನ್ನು ಹೊರತುಪಡಿಸಿ, ಭಾರತದ ಉಪನಾಯಕ ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ಗಳನ್ನು ಒಳಗೊಂಡ 32 ರನ್ ಗಳಿಸಿದರು. ಅಲ್ಲದೆ 5ನೇ ವಿಕೆಟ್ಗೆ ಈ ಇಬ್ಬರು 60 ರನ್ಗಳ ಜೊತೆಯಾಟ ನೀಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ ಉತ್ತಮ ಹೊಡೆತಗಳನ್ನು ಬಾರಿಸಿ ತಂಡವನ್ನು 180 ರನ್ ಗಡಿ ದಾಟುವಂತೆ ಮಾಡಿದರು. ಅಫ್ಘಾನಿಸ್ತಾನ ಪರ ಫಜಲ್ಹಕ್ ಫಾರೂಕಿ ಮತ್ತು ನಾಯಕ ರಶೀದ್ ಖಾನ್ ತಲಾ 3 ವಿಕೆಟ್ ಪಡೆದರು.
ಭಾರತ ನೀಡಿದ 182 ರನ್ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ಅಜ್ಮತುಲ್ಲಾ ಒಮರ್ಜಾಯ್ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಗರಿಷ್ಠ 26 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನಕ್ಕೆ ಉತ್ತಮ ಆರಂಭ ಸಿಗದ ಕಾರಣ ತಂಡ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ಈ ಪಂದ್ಯದಲ್ಲೂ ಭಾರತದ ಬೌಲರ್ಗಳು ದಿಟ್ಟ ಪ್ರದರ್ಶನ ನೀಡಿ ಸ್ಕೋರ್ ಅನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಭಾರತ ಈಗ 2ನೇ ಸೂಪರ್-8 ಪಂದ್ಯದಲ್ಲಿ ಶನಿವಾರ ಬಾಂಗ್ಲಾದೇಶವನ್ನು ಎದುರಿಸಲಿದೆ. ಸೂಪರ್ 8 ಹಂತದ ಗ್ರೂಪ್ 1 ರಲ್ಲಿ ಭಾರತ ಈಗ 2 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಬಾಂಗ್ಲಾದೇಶ ವಿರುದ್ಧ ಗೆದ್ದರೆ ಸಾಕು ಟೀಂ ಇಂಡಿಯಾ ಸೆಮಿಫೈನಲ್ ತಲುಪುತ್ತದೆ.

