ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್-8 ರ 2ನೇ ಗುಂಪಿನ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 3 ವಿಕೆಟ್ ಗಳಿಂದ ರೋಚಕ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಸೆಮಿಫೈನಲ್ಗೇರಿದರೆ, ವೆಸ್ಟ್ ಇಂಡೀಸ್ ತಂಡ ಟಿ-20 ವಿಶ್ವಕಪ್ನಿಂದಲೇ ಹೊರಬಿದ್ದಿದೆ.
ವೆಸ್ಟ್ ಇಂಡೀಸ್ ದೇಶದ
ಅಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡರು. ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಶಾಯ್ ಹೋಪ್ (0) ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ನಿಕೋಲಸ್ ಪೂರನ್ ಕೇವಲ 1 ರನ್ಗಳಿಸಿ ನಿರ್ಗಮಿಸಿದರು. ಆದಾಗ್ಯೂ ಮತ್ತೊಂದೆಡೆ ಕೈಲ್ ಮೇಯರ್ಸ್ ಜವಾಬ್ದಾರಿಯುತ ಬ್ಯಾಟಿಂಗ್ನೊಂದಿಗೆ 34 ಎಸೆತಗಳಲ್ಲಿ 35 ರನ್ ಬಾರಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ರೋಸ್ಟನ್ ಚೇಸ್ 42 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 52 ರನ್ ಬಾರಿಸಿದರು. ಆದರೆ ಚೇಸ್ ಔಟಾಗುತ್ತಿದ್ದಂತೆ ದಿಢೀರ್ ಕುಸಿತಕ್ಕೊಳಗಾದ ವೆಸ್ಟ್ ಇಂಡೀಸ್ ತಂಡವು ಅಂತಿಮವಾಗಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 135 ರನ್ಗಳಿಸಲಷ್ಟೇ ಸುಸ್ತಾಯಿತು.
ನಂತರ ದ್ವಿತೀಯ ಇನಿಂಗ್ಸ್ನ ಆರಂಭದಲ್ಲೇ ಮಳೆ ಬಂದಿದ್ದರಿಂದ ಕೆಲ ಹೊತ್ತು ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಆ ಬಳಿಕ ಮಳೆ ನಿಂತು ಆಟ ಶುರುವಾದಾಗ ಡಕ್ ವರ್ತ್ ಲೂಯಿಸ್ ನಿಯಮಾವಳಿ ಪ್ರಕಾರ ದಕ್ಷಿಣ ಆಫ್ರಿಕಾ ತಂಡಕ್ಕೆ 17 ಓವರ್ಗಳಲ್ಲಿ 123 ರನ್ಗಳ ಗೆಲುವಿನ ಗುರಿ ನೀಡಲಾಯಿತು.
ಈ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ರೀಝ ಹೆಂಡ್ರಿಕ್ಸ್ (0) ಶೂನ್ಯಕ್ಕೆ ಔಟಾದರೆ, ಕ್ವಿಂಟನ್ ಡಿಕಾಕ್ 12 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಐಡೆನ್ ಮಾರ್ಕ್ರಾಮ್ 18 ರನ್ಗಳ ಕೊಡುಗೆ ನೀಡಿದರು.
ಈ ಹಂತದಲ್ಲಿ ಜೊತೆಗೂಡಿದ ಹೆನ್ರಿಕ್ ಕ್ಲಾಸೆನ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 10 ಎಸೆತಗಳಲ್ಲಿ 22 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಕ್ಲಾಸೆನ್ ವಿಕೆಟ್ ಪಡೆಯುವಲ್ಲಿ ಕೊನೆಗೂ ಅಲ್ಝಾರಿ ಜೋಸೆಫ್ ಯಶಸ್ವಿಯಾದರು.
ಇದರ ಬೆನ್ನಲ್ಲೇ ಡೇವಿಡ್ ಮಿಲ್ಲರ್ (4) ರೋಸ್ಟನ್ ಚೇಸ್ ಎಸೆತದಲ್ಲಿ ಬೌಲ್ಡ್ ಆದರೆ, ಟ್ರಿಸ್ಟನ್ ಸ್ಟಬ್ಸ್ (29) ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದರು. ಪರಿಣಾಮ ಕೊನೆಯ 3 ಓವರ್ಗಳಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 19 ರನ್ಗಳ ಅವಶ್ಯಕತೆಯಿತ್ತು.ನಂತರ
15ನೇ ಓವರ್ ಎಸೆದ ಅಲ್ಝಾರಿ ಜೋಸೆಫ್ ಕೇವಲ 6 ರನ್ ಮಾತ್ರ ನೀಡಿದರು. ಅದರಂತೆ ಕೊನೆಯ 12 ಎಸೆತಗಳಲ್ಲಿ 13 ರನ್ಗಳು ಬೇಕಿತ್ತು. ಈ ವೇಳೆ ದಾಳಿಗಿಳಿದ ರೋಸ್ಟನ್ ಚೇಸ್ ಕೇಶವ್ ಮಹಾರಾಜ್ (2) ವಿಕೆಟ್ ಪಡೆದರು. ಇನ್ನು ಕೊನೆಯ ಎಸೆತದಲ್ಲಿ ಕಗಿಸೊ ರಬಾಡ ಫೋರ್ ಬಾರಿಸುವ ಮೂಲಕ ಪಂದ್ಯವನ್ನು ರೋಚಕ ಘಟ್ಟದತ್ತ ಕೊಂಡೊಯ್ದರು.
ಅದರಂತೆ ಅಂತಿಮ ಓವರ್ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಕೇವಲ 5 ರನ್ಗಳ ಅವಶ್ಯಕತೆಯಿತ್ತು. ಒಬೆಡ್ ಮಕಾಯ್ ಎಸೆದ ಕೊನೆಯ ಓವರ್ನ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಮಾರ್ಕೊ ಯಾನ್ಸೆನ್ ದಕ್ಷಿಣ ಆಫ್ರಿಕಾ ತಂಡಕ್ಕೆ 3 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
ವಿಂಡೀಸ್ ತಂಡದ ರೋಸ್ಟನ್ ಚೇಸ್ (52 ರನ್) ಸೇರಿದಂತೆ ಮಹತ್ವದ 3 ವಿಕೆಟ್ ಗಳಿಸಿದ
ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ತಬ್ರೈಜ್ ಶಂಷಿ ಅವರಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಲಾಯಿತು.
ವೆಸ್ಟ್ ಇಂಡೀಸ್-135/8 (20)
ದಕ್ಷಿಣ ಆಫ್ರಿಕಾ ( ಡಕ್ ವರ್ತ್ ಲೂಯಿಸ್ ಪ್ರಕಾರ 17 ಓವರ್ಗಳಲ್ಲಿ 123 ರನ್ ಗೆಲುವಿನ ಗುರಿ)
ದಕ್ಷಿಣ ಆಫ್ರಿಕಾ- 124/7 (16.1 ಓವರ್ ಗಳಲ್ಲಿ)

