ರಾಜಕೀಯ ಸುದ್ದಿ

ಚುನಾವಣೆ ಸಂದರ್ಭದಲ್ಲಿ ಜಪ್ತಿ ಮಾಡಲಾದ ಹಣ ಎಲ್ಲಿಗೆ ಹೋಗುತ್ತೆ?

Share It

ಬೆಂಗಳೂರು:

ಪ್ರತಿ ಚುನಾವಣೆಯ ದಿನಾಂಕ ಮತ್ತು ಅಭ್ಯರ್ಥಿಯ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಪ್ರಚಾರ ಆರಂಭಿಸುತ್ತಾರೆ. ಹತ್ತಾರು ಬಾರಿ ಸಭೆ, ಸಮಾಲೋಚನೆಗಳನ್ನು ನಡೆಸುತ್ತಾರೆ. ರ್‍ಯಾಲಿಗಳು, ಮತದಾರರಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಇಂತಹ ಸಮಯದಲ್ಲಿ ಅಕ್ರಮ ನಗದು, ಚಿನ್ನ, ಮದ್ಯ ಮತ್ತು ಕಪ್ಪು ಹಣ ಸಾಗಿಸಲಾಗುತ್ತೆ. ಹೀಗಾಗಿ ಪೊಲೀಸರು ಚುನಾವಣಾ ಸಮಯದಲ್ಲಿ ಹೈ ಅಲರ್ಟ್ ಆಗುತ್ತಾರೆ. ಅನುಮಾನ ಬರುವ ವಾಹನಗಳು ಹಾಗೂ ಜನರನ್ನು ನಿಲ್ಲಿಸಿ ತಪಾಸಣೆ ನಡೆಸಿ ವಿಚಾರಣೆ ನಡೆಸುತ್ತಾರೆ.

ಇನ್ನು ಮಾಹಿತಿಗಳ ಪ್ರಕಾರ ಚುನಾವಣೆ ಸಂದರ್ಭದಲ್ಲಿ ಜಪ್ತಿ ಮಾಡಲಾದ ಮದ್ಯವನ್ನು ಒಂದು ಕಡೆ ಶೇಖರಿಸಿ ಇಟ್ಟು ಕೊನೆಗೆ ಅಷ್ಟನ್ನೂ ನಾಶಮಾಡಲಾಗುತ್ತದೆ. ರೋಡ್ ರೋಲರ್‌ನಿಂದ ಪುಡಿಮಾಡಿ ನಾಶಪಡಿಸಲಾಗುತ್ತೆ. ಅಮೆಜಾನ್ ಪ್ರೈಮ್​ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪೋಚರ್ ಸರಣಿಯಲ್ಲೂ ಕೂಡ ಅರಣ್ಯ ಅಧಿಕಾರಿಗಳು ಕೇರಳದಲ್ಲಿ ಆದ ಆನೆಯ ದಂತ ಕಳ್ಳಸಾಗಣಿಕೆ ಪ್ರಕರಣವನ್ನು ಭೇದಿಸಿ ಕೊನೆಗೆ ವಶ ಪಡಿಸಿಕೊಂಡ ದಂತವನ್ನು ನಾಶಪಡಿಸುವುದಾಗಿ ಘೋಷಿಸುತ್ತಾರೆ. ಅದೇ ರೀತಿ ಚುನಾವಣೆ ವೇಳೆ ವಶಕ್ಕೆ ಪಡೆದ ಮದ್ಯವನ್ನು ನಾಶ ಮಾಡಲಾಗುತ್ತೆ. ಇನ್ನು ನಗದು, ಆಭರಣದ ವಿಷಯಕ್ಕೆ ಬಂದರೆ ಮೊದಲಿಗೆ ಪೊಲೀಸರೇ ತಮ್ಮ ವ್ಯಾಪ್ತಿಯಲ್ಲಿ ಜಪ್ತಿಯಾದ ಹಣದ ಬಗ್ಗೆ ವಿಚಾರಣೆ ನಡೆಸುತ್ತಾರೆ. ಹಣದ ಮೂಲ ಯಾವುದು, ಅದು ಕಪ್ಪು ಹಣವೇ ಎಂದು ತನಿಖೆಗೆ ಇಳಿಯುತ್ತಾರೆ. ಹಣದ ಮೊತ್ತ ಹೆಚ್ಚಿದ್ದರೆ ಅದು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ.

ಚುನಾವಣೆ ವೇಳೆ ವಶ ಪಡಿಸಿಕೊಂಡ ಹಣ ವಾಪಸ್ ಪಡೆಯಬಹುದಾ?
ಚುನಾವಣೆ ಸಂದರ್ಭದಲ್ಲಿ ಪೊಲೀಸರು, ಅಧಿಕಾರಿಗಳು ವಶಕ್ಕೆ ಪಡೆದ ನಗದು, ಆಭರಣಗಳನ್ನು ಕ್ಲೈಮ್ ಮಾಡಿಕೊಳ್ಳಬಹುದು. ಆದರೆ ಆ ಹಣ ತನ್ನದು ಎಂದು ಸಾಬೀತುಪಡಿಸಬೇಕಾಗುತ್ತೆ. ಮೊದಲಿಗೆ ಹಣ ಅಥವಾ ಒಡವೆ ಜಪ್ತಿ ಮಾಡಿ, ಅದನ್ನು ಆಧಾರವಿಲ್ಲದ ಹಣ ಎಂದು ಕೇಸ್ ಹಾಕಲಾಗುತ್ತೆ. ಎಫ್​ಐಆರ್ ದಾಖಲಾಗುತ್ತೆ. ಹೀಗಾಗಿ ಈ ಪ್ರಕರಣ ಕೋಟಿಗೆ ಹೋಗುತ್ತೆ. ಬಳಿಕ ವ್ಯಕ್ತಿ ಆ ಹಣಕ್ಕೆ ಅಥವಾ ಆ ಒಡವೆಗೆ ಸರಿಯಾದ ಆಧಾರವನ್ನು ಸಲ್ಲಿಸಿ ಇದು ಅಕ್ರಮವಾಗಿ ಗಳಿಸಿದಲ್ಲ, ಅಥವಾ ಯಾವ ಪಕ್ಷದ ಹಣವೂ ಅಲ್ಲ ಎಂದು ಸಂಪೂರ್ಣ ಮಾಹಿತಿಯನ್ನು ಪುರಾವೆಯಾಗಿ ಸಲ್ಲಿಸಿದ ನಂತರ ಹಣ, ಒಡವೆಯನ್ನು ಇಲಾಖೆ ಹಿಂತಿರುಗಿಸುತ್ತದೆ. ಸುಮಾರು ಒಂದು ವಾರಗಳ ಕಾಲ ಕೋರ್ಟ್​ನಲ್ಲಿ ಚರ್ಚೆ, ದಾಖಲೆಗಳ ಪರಿಶೀಲನೆ ಬಳಿಕ ನಿಮ್ಮ ವಸ್ತುಗಳು ನಿಮ್ಮ ಕೈ ಸೇರುತ್ತವೆ. ಆದರೆ ಮುಟ್ಟುಗೋಲು ಹಾಕಿಕೊಂಡ ಹಣವನ್ನು ಯಾರೂ ಕ್ಲೇಮ್ ಮಾಡದಿದ್ದಲ್ಲಿ ಅದು ಸರ್ಕಾರದ ಖಜಾನೆಗೆ ಜಮೆಯಾಗುತ್ತದೆ. ವ್ಯಕ್ತಿಯು ಸಂಪೂರ್ಣ ಮಾಹಿತಿಯನ್ನು ಪುರಾವೆಯಾಗಿ ಪ್ರಸ್ತುತಪಡಿಸಿದರೆ ಮಾತ್ರ ಹಣವನ್ನು ಹಿಂತಿರುಗಿಸಲಾಗುತ್ತದೆ. ಪುರಾವೆಗಾಗಿ, ಎಟಿಎಂ ವಹಿವಾಟು, ಬ್ಯಾಂಕ್ ರಸೀದಿ ಮತ್ತು ಪಾಸ್‌ಬುಕ್‌ನಲ್ಲಿ ನಿಖರ ಮಾಹಿತಿಯನ್ನು ಹೊಂದಿರಬೇಕು. ಲೋಕಸಭಾ, ವಿಧಾನಸಭಾ ಯಾವುದೇ ಚುನಾವಣೆಯಾದರೂ ಇದೇ ನಿಯಮ ಅನ್ವಯವಾಗುತ್ತದೆ.


Share It

You cannot copy content of this page