ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಪ್ರಕರಣ ಇದೀಗ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದ್ದು, ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.
ರಾಜ್ಯಪಾಲರ ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಲು ಸುಪ್ರೀಂ ಕೋರ್ಟ್ ನ ಖ್ಯಾತ ವಕೀಲರು ಹಾಗೂ ಕಾಂಗ್ರೆಸ್ ಮುಖಂಡರು ಆದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಖಾಸಗಿ ದೂರನ್ನು ಆಧರಿಸಿ ಈವರೆಗೆ ರಾಜ್ಯಪಾಲರು ಯಾವುದೇ ಜನಪ್ರತಿನಿಧಿಯ ವಿರುದ್ಧ ತನಿಖೆಗೆ ಆದೇಶ ನೀಡಿದ ಉದಾಜರಣೆ ಇಲ್ಲ. ಪೊಲೀಸ್ ಸೇರಿದಂತೆ ತನಿಖಾ ಪ್ರಾಧಿಕಾರಗಳ ಮನವಿ ಮೇರೆಗಷ್ಟೇ ರಾಜ್ಯಪಾಲರು ಅನುಮತಿ ಕೊಟ್ಟಿರುವ ಉದಾಹರಣೆಗಳಿಗೆ. ಹೀಗಾಗಿ, ಇದೇ ವಿಚಾರದಲ್ಲಿ ಕಾನೂನು ಸಂಘರ್ಷ ನಡೆಸಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.
ಈ ಸಂಬಂಧ ಕೇಂದ್ರ ಸರಕಾರದ ಅಧಿಕೃತ ಆದೇಶವೇ ಇದ್ದು, ಪೊಲೀಸ್ ಪ್ರಾಧಿಕಾರದ ಮನವಿ ಮೇರೆಗಷ್ಟೇ ಅನುಮತಿ ನೀಡಬಹುದು ಎಂದು ಸ್ಪಷ್ಟವಾಗಿ ಉಲ್ಲೇಖತವಾಗಿದೆ. ಹೀಗಿದ್ದೂ, ರಾಜ್ಯಪಾಲರು ತೆಗೆದುಕೊಂಡಿರುವ ಕ್ರಮ ಕಾನೂನು ಬಾಹಿರ ಮತ್ತು ರಾಜಕೀಯ ಪ್ರೇರಿತ ಎಂಬುದು ಕಾನೂನು ತಜ್ಞರ ಅಭಿಪ್ರಾಯ. ಹೀಗಾಗಿ, ಸಿದ್ದರಾಮಯ್ಯ ಪರ ವಕೀಲರು ಇಂದು ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಕೆ ಮಾಡಲಿದ್ದಾರೆ. ಅರ್ಜಿ ಕುರಿತು ವಾದ ಮಂಡಿಸಲು ಕಪಿಲ್ ಸಿಬಲ್ ಮತ್ತು ಸಿಂಘ್ವಿ ಆಗಮಿಸಲಿದ್ದಾರೆ.
ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಸುಪ್ರೀಂ ಕೋರ್ಟ್ ಖ್ಯಾತ ವಕೀಲರು. ಅನೇಕ ಪ್ರಕರಣದಲ್ಲಿ ಸರಕಾರ ಮತ್ತು ಪ್ರಾಧಿಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಚಾಣಾಕ್ಷ್ಯ ವಕೀಲರು. ದೊಡ್ಡ ದೊಡ್ಡ ಪ್ರಕರಣಗಳಲ್ಲಿ ವಾದ ಮಂಡಿಸಿ, ಯಶಸ್ವಿಯಗಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಪರ ವಾದ ಮಂಡಿಸಿ, ಬಿಜೆಪಿ ಮತ್ತು ರಾಜ್ಯಪಾಲರನ್ನು ಇಕ್ಕಟ್ಟಿಗೆ ಸಿಲುಕಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

