ಸುದ್ದಿ

ಇನ್‌ಸ್ಟಾಗ್ರಾಮ್ ಮೂಲಕ ಅಪ್ರಾಪ್ತೆಗೆ ವಂಚಿಸಿ ಲೈಂಗಿಕ ದೌರ್ಜನ್ಯ; ಕಾರು ಚಾಲಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

Share It

ಮಂಗಳೂರು: ಇನ್‌ಸ್ಟಾಗ್ರಾಮ್ ಮೂಲಕ ಬಾಲಕಿಯನ್ನು ಪ್ರೀತಿ ಬಲೆಯಲ್ಲಿ ಬೀಳಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದ ಪ್ರಕರಣದ ಅಪರಾಧಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಎಫ್‌ಟಎಸ್‌ಸಿ-2 (FTSC-2) ಪೋಕ್ಸೋ ಕೋರ್ಟ್ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದೆ.

ಗುರುಪುರ ಅಡ್ಡೂರು ಕೆಳಗಿನಕೆರೆಮನೆ ನಿವಾಸಿ ಆಫ್ರಿದಿ ಅಲಿಯಾಸ್ ಆಫ್ರಿ (20) ಶಿಕ್ಷೆಗೊಳಗಾದ ಅಪರಾಧಿ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ನಿವಾಸಿ 17 ವರ್ಷದ ಅಪ್ರಾಪ್ತೆಯೊಬ್ಬಳು ಫ್ಯಾಷನ್ ಡಿಸೈನಿಂಗ್ ಕಲಿಯುತ್ತಿದ್ದ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಕಾರು ಚಾಲಕ ಆಫ್ರಿದಿ ಪರಿಚಯವಾಗಿದ್ದ. ಬಾಲಕಿ ಜತೆ ಆತ್ಮೀಯತೆ ಬೆಳೆಸಿಕೊಂಡ ಆರೋಪಿ, ನಂತರ ಆಕೆ ಜತೆ ಪ್ರೀತಿ ನಾಟಕವಾಡಿದ್ದಲ್ಲದೆ ಮದುವೆಯಾಗುವುದಾಗಿ ನಂಬಿಸಿದ್ದ.

2024ರ ಮೇ 27ರ ಬೆಳಗ್ಗೆ 11 ಗಂಟೆ ವೇಳೆಗೆ ಬಾಲಕಿ ಮನೆಯಲ್ಲಿದ್ದ ಸಂದರ್ಭದಲ್ಲಿ ಆರೋಪಿ ಅಲ್ಲಿಗೆ ತೆರಳಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಅಷ್ಟೇ ಮಾತ್ರವಲ್ಲದೆ ಕೃತ್ಯದ ವಿಡಿಯೋ ಮಾಡಿಕೊಂಡಿದ್ದ, ಮುಂದೆ ತನಗೆ ದೈಹಿಕ ಸಂಪರ್ಕಕ್ಕೆ ಸಹಕರಿಸಬೇಕು, ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಹಾಗೂ ಜೀವಸಹಿತ ಬಿಡುವುದಿಲ್ಲವೆಂದು ಬಾಲಕಿಗೆ ನಿರಂತರ ಬೆದರಿಕೆ ಹಾಕಿದ್ದ. ಬ್ಲ್ಯಾಕ್‌ಮೇಲ್ ಮೂಲಕ ಆಕೆ ಮೇಲೆ ಪದೇಪದೆ ಲೈಂಗಿಕ ದೌರ್ಜನ್ಯ ಎಸಗಿದ್ದ.

ಆರೋಪಿ ಕಿರುಕುಳ ತಾಳಲಾರದೆ ಬಾಲಕಿ ಹೆತ್ತವರು 2025ರ ಜೂನ್ 1ರಂದು ತಮ್ಮ ಬಾಡಿಗೆ ಮನೆ ಬದಲಾಯಿಸಿ ಬಂಟ್ವಾಳ ತಾಲೂಕಿನಿಂದ ಬೆಳ್ತಂಗಡಿಗೆ ಸ್ಥಳಾಂತರಗೊಂಡಿದ್ದರು. ಆದರೆ, ಈ ಹೊಸ ಮನೆ ವಿಳಾಸವನ್ನೂ ಪತ್ತೆ ಹಚ್ಚಿದ ಆಫ್ರಿದಿ, 2025ರ ಆಗಸ್ಟ್ 6ರಂದು ಮತ್ತೆ ಆ ಮನೆಗೂ ತೆರಳಿ ದೈಹಿಕ ಸಂಪರ್ಕ ಬೆಳೆಸಿದ್ದ. ಇದಾದ ಬಳಿಕ ಆರೋಪಿ ಬಾಲಕಿಯಿಂದ ದೂರ ಸರಿದಿದ್ದು, ಈ ವಿಚಾರವಾಗಿ 2025ರ ಆಗಸ್ಟ್ 30ರಂದು ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಆರೋಪಿ ಆಕೆಗೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿ ವಂಚಿಸಿದ್ದ.

ಆರೋಪಿಯಿಂದ ವಂಚನೆಗೊಳಗಾದ ಬಾಲಕಿ ಮನನೊಂದು ಮನೆಯಲ್ಲಿ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಆಕೆಯನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಘಟನೆ ಬಳಿಕ ಆರೋಪಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಸುದೀರ್ಘ ಹಾಗೂ ಸಮಗ್ರ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಎಫ್‌ಟಎಸ್‌ಸಿ-2 ಪೋಕ್ಸೋ ಕೋರ್ಟ್‌ನ ನ್ಯಾಯಾಧೀಶರಾದ ಕೆ.ಎಸ್.ಮಾನು ಅವರು ಅಪರಾಧ ಸಾಬೀತಾಗಿದೆ ಎಂದು ತೀರ್ಪು ಪ್ರಕಟಿಸಿದ್ದಾರೆ.

IPC 376(2)(n) ಹಾಗೂ ಪೋಕ್ಸೋ ಕಾಯ್ದೆ 2012ರ ಕಲಂ 6ರ ಅಡಿ: 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಭರಿಸಲು ತಪ್ಪಿದಲ್ಲಿ ಹೆಚ್ಚುವರಿ 4 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ. IPC 506 (ಬೆದರಿಕೆ) ಅಡಿ 3 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ತರಲು ತಪ್ಪಿದಲ್ಲಿ 15 ದಿನಗಳ ಸಾದಾ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಎರಡೂ ಶಿಕ್ಷೆಗಳನ್ನು ಅಪರಾಧಿ ಏಕಕಾಲದಲ್ಲಿ ಅನುಭವಿಸಬಹುದಾಗಿದೆ.

ಸಂತ್ರಸ್ತೆಗೆ ಪರಿಹಾರ: ನ್ಯಾಯಾಲಯ ಸಂತ್ರಸ್ತ ಬಾಲಕಿಗೆ ಒಟ್ಟು 6 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದೆ. ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸುವಲ್ಲಿ ಬೆಳ್ತಂಗಡಿ ಠಾಣೆ ಇನ್‌ಸ್ಪೆಕ್ಟರ್ ರವಿ ಬಿ.ಎಸ್. ಕಾರ್ಯ ನಿರ್ವಹಿಸಿದ್ದರು. ಸಂತ್ರಸ್ತೆ ಪರ ಪೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದರು.


Share It

You cannot copy content of this page