ಯಾದಗಿರಿ : ಲೋಕಸಭೆ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳಿರುವಾಗ ರಾಜ್ಯದಲ್ಲಿ ಕೋಮು ಘರ್ಷಣೆ, ಹಲ್ಲೆ, ಕೊಲೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಾರಂಭವಾಗಿದೆ.
ಕೆಲವು ದಿನಗಳ ಹಿಂದೆ ರಾಮನ ನವಮಿ ದಿವಸ ಬೆಂಗಳೂರಿನಲ್ಲಿ ಜೈ ಶ್ರೀರಾಂ ಘೋಷಣೆ ಕೂಗಿದ್ದವರ ಮೇಲೆ ಹಲ್ಲೆ ಮಾಡಲಾಗಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ನಂತರ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣದ ಕಹಿ ನೆನಪು ಇನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ, ಯಾದಗಿರಿಯಲ್ಲಿ ಅಂತರ್ ಧರ್ಮೀಯ ಕೊಲೆ ನಡೆದಿದೆ.
ಯಾದಗಿರಿಯ ಶಗಾಪುರಪೇಟೆ ಬಡಾವಣೆಯಲ್ಲಿ ಮುಸ್ಲಿಂ ಯುವಕನೊಬ್ಬ ದಲಿತ ಯುವಕನ ಹತ್ಯೆ ಮಾಡಿದ್ದಾನೆ. ರಾಕೇಶ್ (22) ಕೊಲೆಯಾದ ಯುವಕ. ರೊಟ್ಟಿ ಕೇಂದ್ರದ ಸದಸ್ಯ ಫಯಾಜ್ ಸೇರಿದಂತೆ ನಾಲ್ವರು ಕೃತ್ಯ ಎಸಗಿದ್ದಾರೆ.
ನಿನ್ನೆ ರಾತ್ರಿ ರಾಕೇಶ್ ರೊಟ್ಟಿ ಕೇಂದ್ರಕ್ಕೆ ಹೋಗಿ ರೊಟ್ಟಿ ತರಲು ಹೋಗಿದ್ದ. ಈ ವೇಳೆ ರೊಟ್ಟಿ ಕೇಂದ್ರದ ಫಯಾಜ್ ಜೊತೆ ಕಿರಿಕ್ ಆಗಿದೆ. ರಾಕೇಶ್ ಮನೆಗೆ ಮರಳಿದ ನಂತರ ಮತ್ತೆ ಜಗಳವಾಗಿದ್ದು, ಈ ವೇಳೆ ರಾಕೇಶ್ನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಆರೋಪ ಮಾಡಲಾಗಿದೆ.
ಇನ್ನು ಆರೋಪಿ, ಕೊಲೆಯಾದ ಯುವಕನ ಕುಟುಂಬದ ನಡುವೆ ನಿನ್ನೆ ರಾತ್ರಿ 11 ಗಂಟೆ ಘಟನೆ ಕೊಲೆ ನಂತರ ಸಂಧಾನ ಮಾತುಕತೆ ಮಾಡಲಾಗಿದೆ. ಇದಾದ ನಂತರ ಬಿಜೆಪಿ ಮುಖಂಡರ ನೆರವಿನಲ್ಲಿ ಕೊಲೆಯಾದ ರಾಕೇಶ್ ತಾಯಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಸಂಗೀತಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದ ನಂತರ ರಾಕೇಶ್ ಶವ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಯಾದಗಿರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.