ಮೋದಿ ನಂತರ ಮುಂದ್ಯಾರು ಪ್ರಶ್ನೆಗೆ ಬಿಜೆಪಿಯಲ್ಲಿ ತಲ್ಲಣ
ಆರ್‌ಎಸ್‌ಎಸ್ ಅಂಗಳದಲ್ಲಿ ಅಮಿತ್ ಶಾ ಹೆಸರು ರಿಂಗಣ
ಬೆಂಗಳೂರು: ಜೈಲಿನಿಂದ ಹೊರಬರುತ್ತಿದ್ದಂತೆಯೇ ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಎಸೆದ ಗೂಗ್ಲಿಗೆ ಬಿಜೆಪಿ ಗಲಿಬಿಲಿಯಾಗಿದೆ. ಮೋದಿ ನಂತರ ಯಾರು? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಬಿಜೆಪಿಯೊಳಗೆ ತಲ್ಲಣ ಏರ್ಪಟ್ಟಿದೆ.
ಅರವಿಂದ ಕೇಜ್ರೀವಾಲ್ ಮಾತು ಬಿಜೆಪಿಯನ್ನು ಅದೆಷ್ಟು ಅರ್ಟ್ ಮಾಡಿದೆ ಎಂದರೆ, ಸ್ವತಃ ಗೃಹ ಸಚಿವ ಅಮಿತ್ ಶಾ, ಸಿಡಿಮಿಡಿಗೊಂಡಿದ್ದಾರೆ. ಈ ಕುರಿತ ಮಾಧ್ಯಮದ ಪ್ರಶ್ನೆಗೆ ಸಿಡುಕಿನಿಂದಲೇ ಉತ್ತರ ನೀಡಿದ್ದಾರೆ. ಅವರ ಮಾತಿನಲ್ಲಿಯೇ ಈ ಹೇಳಿಕೆ ಮಾಡಿರುವ ಘಾಸಿ ಅರ್ಥವಾಗುತ್ತದೆ. ಈ ಹೇಳಿಕೆಯ ನಂತರ ಬಿಜೆಪಿಯ ಹೈಕಮಾಂಡ್ ಮತ್ತು ಆರ್‌ಎಸ್‌ಎಸ್ ವಲಯದಲ್ಲಿ ಹೌದಲ್ಲ, ಮುಂದೇನು? ಎಂಬ ಚರ್ಚೆ ಆರಂಭವಾಗಿದೆ.
ಬಿಜೆಪಿ ಅಧಿಕಾರದಲ್ಲಿರಲು 75 ವರ್ಷದ ಗಡುವು ಹಾಕಿಕೊಂಡು ಅಲಿಖಿತ ನಿಯಮ ರೂಪಿಸಿಕೊಂಡಿದೆ. ಇದೇ ಕಾರಣ ನೀಡಿದ ಅನೇಕ ಹಿರಿಯರನ್ನು ಅಧಿಕಾರದಿಂದ ದೂರ ಇಡಲಾಗಿದೆ. ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಕರ್ನಾಟಕದಲ್ಲಿ ಯಡಿಯೂರಪ್ಪ, ಸೇರಿ ಅನೇಕರನ್ನು ವಯಸ್ಸಿನ ನೆಪದಲ್ಲಿ ಅಧಿಕಾರ ಮತ್ತು ಪಕ್ಷದಿಂದ ಹೊರಗಿಡಲಾಗಿದೆ. ಇದೀಗ, ಕೇಜ್ರೀವಾಲ್ ಪ್ರಶ್ನೆಯಿಂದ ಈ ನಿಯಮ ಮೋದಿ ವಿಚಾರದಲ್ಲಿಯೂ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಬಿಜೆಪಿ ಮೋದಿ ನಂತರ ಮತ್ಯಾರು ಎಂಬುದನ್ನು ಪ್ರಸ್ತುತ ಸನ್ನಿವೇಶದಲ್ಲಿ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಮೋದಿ ನಂತರ ಯೋಗಿ ಆದಿತ್ಯನಾಥ್ ಎಂಬುದಾಗಿ ಬಿಂಬಿಸಲಾಗುತ್ತಿದ್ದಾರೂ, ಈ ಸಲದ ಲೋಕಸಭಾ ಚುನಾವಣೆಯಲ್ಲಿ ಎಲ್ಲಿಯೂ ಯೋಗಿಯನ್ನು ಮುಂಚೂಣಿಗೆ ತಂದಿಲ್ಲ. ಇದು ಸಹಜವಾಗಿ ಯೋಗಿ ಆದಿತ್ಯನಾಥ್ ಮೂಲೆಗುಂಪು ಮಾಡುವ ಪ್ರಯತ್ನದ ಭಾಗವಾಗಿಯೇ ಕಾಣುತ್ತಿದೆ. ಹಾಗಾದರೆ, ಅಮಿತ್ ಶಾ ಅಧಿಕಾರಕ್ಕೆ ಬರಲು ಮೋದಿ ಮುಖವನ್ನು ಬಳಸಿಕೊಳ್ಳಲಾಗುತ್ತಿದೆಯಾ ಎಂಬ ಪ್ರಶ್ನೆ ಇದೀಗ ಬಿಜೆಪಿ ವಲಯವನ್ನು ಆಕ್ರಮಿಸಿದೆ.
ಈವರೆಗೆ ಮತ್ತೊಮ್ಮೆ ಮೋದಿ ಎನ್ನುತ್ತಲೇ ಮತ ಕೇಳುತ್ತಿದ್ದ ಬಿಜೆಪಿ ಕಾರ್ಯಕರ್ತರು ಇದೀಗ ಗೊಂದಲಕ್ಕೆ ಬಿದ್ದಿದ್ದಾರೆ. ಅಧಿಕಾರ ನೀಡುವಾಗ ವಯಸ್ಸಿನ ನಿಯಮ ಮೋದಿಗೆ ಜಾರಿಯಾದರೆ ಅವರು ಅಧಿಕಾರದಿಂದ ದೂರ ಉಳಿಯಲೇಬೇಕು. ಆದರೆ, ನಿಯಮ ಉಲ್ಲಂಘಿಸಿ ಅವರಿಗೆ ಅಧಿಕಾರ ನೀಡಿದರೆ, ಅದು ಮತ್ತೊಮ್ಮೆ ಎದುರಾಳಿಗಳ ದಾಳಿಗೆ ಉತ್ತರ ನೀಡಬೇಕಾದ ಅನಿವಾರ್ಯತೆ ಸೃಷ್ಟಿಸುತ್ತದೆ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ.
ಇನ್ನು ಮೋದಿ ಹೆಸರಲ್ಲಿ, ಪಕ್ಷವನ್ನು ಅಧಿಕಾರಕ್ಕೆ ತಂದು, ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಬಂದಾಗ ವಯಸ್ಸಿನ ಕಾರಣ ನೀಡಿ ಮೋದಿ ಅವರನ್ನು ಹೊರಗಿಟ್ಟು ಅಮಿತ್ ಶಾ ಅಧಿಕಾರ ಹಿಡಿಯಲು ಇಷ್ಟೆಲ್ಲ ಯೋಜನೆ ರೂಪಿಸಿದ್ದಾರಾ ಎಂಬ ಅನುಮಾನ ಇದೀಗ ಬಿಜೆಪಿ ಕಾರ್ಯಕರ್ತರನ್ನೇ ಕಾಡಲಾರಂಭಿಸಿದೆ. ಅಷ್ಟರಮಟ್ಟಿಗೆ ಕೇಜ್ರೀವಾಲ್ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇದಕ್ಕಾಗಿಯೇ ಅಮಿತ್ ಶಾ ಇನ್ನು 75 ವರ್ಷವಾದರೂ ಮೋದಿಯೇ ಪ್ರಧಾನಿ ಎಂಬ ಹೇಳಿಕೆ ನೀಡಿರುವುದು.
ಒಟ್ಟಾರೆ, ಜೈಲಿನಿಂದ ಬರುತ್ತಿದ್ದಂತೆ ಕೇಜ್ರೀವಾಲ್ ಸಿಡಿಸಿದ ಸಿಡಿಗುಂಡು ಬಿಜೆಪಿ ಪಾಳೆಯದಲ್ಲಿ ಅಲ್ಲೋಲಕಲ್ಲೋಲ ಏಳಿಸಿದೆ. ಬಿಜೆಪಿ ಕಾರ್ಯಕರ್ತರಿಗೆ ಮೋದಿ ಮತ್ತೊಮ್ಮೆ ಎಂಬ ಬಗ್ಗೆ ಅನುಮಾನ ಕಾಡುತ್ತಿದ್ದರೆ, ಮೋದಿಗಾಗಿ ಮತ ಹಾಕಿ ಎಂದು ಹೇಳುವವರು ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ. ಒಟ್ಟಾರೆ, ಬರುತ್ತಿದ್ದಂತೆ ಕೇಜ್ರೀವಾಲ್ ಬಿಜೆಪಿ ಹೈಕಮಾಂಡ್‌ಗೆ ದೊಡ್ಡ ಕೆಲಸ ಕೊಟ್ಟಿದ್ದಾರೆ. ಇದು ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ.