ತುಮಕೂರು: ತುಮಕೂರು ಜಿಲ್ಲೆಯ ಅಂತರಸನಹಳ್ಳಿ ಬಳಿ ರಾಷ್ಟೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಕೈಗೆತ್ತಿಕೊಂಡ ಪರಿಣಾಮ ಗಂಟೆಗಟ್ಟಲೇ ಸಂಚಾರ ದಟ್ಟಣೆ ಉಂಟಾದ ಘಟನೆ ನಡೆದಿದೆ.
ಶಿರಾ ಮತ್ತು ತುಮಕೂರಿನ ನಡುವೆಯ ಅಂತರಸನಹಳ್ಳಿ ಗೇಟ್ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ನಡೆಸಲು ರಾಷ್ಟೀಯ ಹೆದ್ದಾರಿಯಲ್ಲಿ ಬರುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಸರಿಯಾಗಿ ಮಾಡದ ಕಾರಣದಿಂದ ಶಿರಾ ಕಡೆಯಿಂದ ಬೆಂಗಳೂರಿಗೆ ಬರುವ ವಾಹನಗಳು ಸಾಲುಗಟ್ಟಿ ನಿಂತಿವೆ.
ಸುಮಾರು ಸಂಜೆ ೫ ಗಂಟೆಯಿಂದಲೂ ತುಮಕೂರು ರಸ್ತೆಯಲ್ಲಿ ಇದೇ ಪರಿಸ್ಥಿತಿಯಿದ್ದು, ನೂರಾರು ವಾಹನಗಳು ಸಾಲುಗಟ್ಟಿ ರಸ್ತೆಯಲ್ಲಿಯೇ ನಿಂತಿವೆ. ಹೈವೆ ಪ್ರಾಧಿಕಾರದ ನಡೆಗೆ ವಾಹನ ಸವಾರರು ಹಿಡಿಶಾಪ ಹಾಕಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸದೆ, ಇಂತಹ ಕಾಮಗಾರಿ ನಡೆಸುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.