ಬೆಂಗಳೂರು: ಮುಂಬೈನಲ್ಲಿ ಭಾರಿ ಮಳೆ ಮತ್ತು ಗಾಳಿಗೆ ಬೃಹತ್ ಜಾಹೀರಾತು ಫಲಕವೊಂದು ಮುರಿದುಬಿದ್ದು 16 ಜನ ಸಾವನ್ನಪ್ಪಿದ ಪ್ರಕರಣದ ನಂತರ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಅಕ್ರಮ ಜಾಹೀರಾತು ತೆರವಿಗೆ ಮುಂದಾಗಿದೆ.
ಹೆಬ್ಬಾಳ ಸೇರಿದಂತೆ ನಗರದ ವಿವಿದೆಡೆ ತೆರವು ಕಾರ್ಯ ಆರಂಭಿಸಿರುವ ಬಿಬಿಎಂಪಿ, ಅಕ್ರಮವಾಗಿ ಜಾಹೀರಾತು ಫಲಕ ಅಳವಡಿಸಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಅವಧಿ ಮುಗಿದಿರುವ, ಬಿಬಿಎಂಪಿ ನಿಯಮಾವಳಿಗಳಿಗೆ ವಿರುದ್ಧವಾಗಿ ನಿರ್ಮಿಸಿರುವ ಫಲಕಗಳನ್ನು ತೆರವುಗೊಳಿಸುವಂತೆ ನೊಟೀಸ್ ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ಅಮರೇಶ್ ಎಂಬುವವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಜಾಹೀರಾತು ಫಲಕಗಳ ತೆರವಿಗೆ ಕ್ರಮವಹಿಸುವಂತೆ ಮನವಿ ಮಾಡಿಕೊಂಡಿದ್ದರು. ಮುಂಬೈನಲ್ಲಿ ಆಗಿರುವ ಅನಾಹುತ ಬೆಂಗಳೂರಿನಲ್ಲಿ ಆಗದಿರುವಂತೆ ತಡೆಯಲು ಬಿಬಿಎಂಪಿಗೆ ಎಚ್ಚರಿಕೆ ನೀಡಬೇಕು. ಅಕ್ರಮವಾಗಿ ನಿರ್ಮಿಸಿರುವ ಜಾಹೀರಾತು ಫಲಕ ತೆರವು ಮಾಡುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಬಿಬಿಎಂಪಿ ಗೆ ಸೂಚನೆ ನೀಡಿದ್ದು, ಬಿಬಿಎಂಪಿ ತೆರವು ಕಾರ್ಯ ಆರಂಭಿಸಿದೆ. ಮಳೆ ಮತ್ತು ಗಾಳಿಯಿಂದ ಅನೇಕ ಮರಗಳು ಧರೆಗೆ ಉರುಳುತ್ತಿವೆ. ನಗರದಲ್ಲಿ ಅನಾಹುತಗಳು ಸಂಭವಿಸುತ್ತಿವೆ. ಅದರ ಜತೆಗೆ ಜಾಹೀರಾತು ಫಲಕಗಳು ಅಪಾಯಕಾರಿ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಕ್ರಮ ವಹಿಸಬೇಕು ಎಂಬುದು ಅರ್ಜಿದಾರರ ಮನವಿಯಾಗಿತ್ತು.