ಬೆಂಗಳೂರು, ಮೇ 15: ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಎಸ್‌ಐಟಿ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ, ಇಂದು (ಮೇ 15) ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸುತ್ತಾರೆ ಎನ್ನುವ ಖಚಿತ ಸುದ್ದಿ ಇತ್ತು.
ಇದಕ್ಕೆ ತಕ್ಕಂತೆ ಪ್ರಜ್ವಲ್ ಸಹ ಜರ್ಮನಿಯಿಂದ ಬೆಂಗಳೂರಿಗೆ ಫ್ಲೈಟ್ ಟಿಕೆಟ್ ಸಹ ಬುಕ್ ಮಾಡಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ಗಾಗಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ.
ಆದ್ರೆ, ಪ್ರಜ್ವಲ್ ರೇವಣ್ಣ, ಕೊನೆ ಕ್ಷಣದಲ್ಲಿ ಮತ್ತೊಮ್ಮೆ ಜರ್ಮನಿಯಿಂದ ವಿಮಾನ ಹತ್ತದೇ ಅಲ್ಲೇ ಉಳಿದುಕೊಂಡಿದ್ದಾರೆ. ಈ ಮೂಲಕ ವಿದೇಶದಲ್ಲಿದ್ದುಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ಜರ್ಮನ್ ಕಾಲಮಾನದ ಪ್ರಕಾರ ಇಂದು (ಮೇ 15) 12.20ರ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಆದ್ರೆ, ಪ್ರಜ್ವಲ್ ಕೊನೆ ಕ್ಷಣದಲ್ಲಿ ವಿಮಾನ ಹತ್ತದೇ ಮತ್ತೊಮ್ಮೆ ಬೆಂಗಳೂರು ಪ್ರಯಾಣವನ್ನು ರದ್ದು ಮಾಡಿದ್ದಾರೆ. ಪ್ರಜ್ವಲ್ ಬುಕ್ ಮಾಡಿದ್ದ ವಿಮಾನ ಈಗಾಗಲೇ ಜರ್ಮನಿಯಿಂದ ಟೇಕಾಫ್ ಆಗಿದೆ. ಆದ್ರೆ, ಪ್ರಜ್ವಲ್ ವಿಮಾನದಲ್ಲಿ ಬೋರ್ಡಿಂಗ್ ಆಗದೆ ಅಲ್ಲೇ ಉಳಿದುಕೊಂಡಿದ್ದಾರೆ. ಪ್ಯಾಸೆಂಜರ್ ಲಿಸ್ಟ್ನಲ್ಲಿ ಪ್ರಜ್ವಲ್ ರೇವಣ್ಣ ಅವರ ಹೆಸರು ಸಹ ಇಲ್ಲ ಎಂದು ತಿಳಿದುಬಂದಿದೆ.
ಪ್ರಜ್ವಲ್ ರೇವಣ್ಣ ಈಗಾಗಲೇ ಒಂದು ಸಲ ಟಿಕೆಟ್ ಬುಕ್ ಮಾಡಿ ವಿಮಾನ ಹತ್ತದೇ ಅಲ್ಲೇ ಉಳಿದುಕೊಂಡಿದ್ದರು. ಇದೀಗ ಮತ್ತೊಮ್ಮೆ ಟಿಕೆಟ್ ಬುಕ್ ಮಾಡಿದರೂ ಪ್ರಯಾಣ ಮಾಡದೆ ಜರ್ಮನಿಯಲ್ಲೇ ಉಳಿದುಕೊಂಡಿದ್ದಾರೆ.
ತಂದೆ ಶಾಸಕ ಎಚ್.ಡಿ.ರೇವಣ್ಣಗೆ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಪುತ್ರ ಪ್ರಜ್ವಲ್ ಇಂದು ಮಧ್ಯರಾತ್ರಿ ಬೆಂಗಳೂರಿಗೆ ಬರಲು ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಆದ್ರೆ, ಅದೇನಾಯ್ತೋ ಏನು ಮತ್ತೊಮ್ಮೆ ಬರದೇ ವಿದೇಶದಲ್ಲಿದ್ದುಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ.
ಪ್ರಜ್ವಲ್ ವಿದೇಶದ ಕುಳಿತುಕೊಂಡೇ ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದ್ದು, ವಕೀಲರು ನೀಡುತ್ತಿರುವ ಸಲಹೆ ಸೂಚನೆಗಳನ್ನು ಪ್ರಜ್ವಲ್ ಪಾಲನೆ ಮಾಡುತ್ತಿದ್ದಾರೆ. ವಕೀಲರು ಯಾವಾಗ ಬರಲು ಹೇಳುತ್ತಾರೋ ಅಂದು ಪ್ರಜ್ವಲ್ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ.
ಇತ್ತ ವಕೀಲರ ಜೊತೆ ರೇವಣ್ಣ ಚರ್ಚೆ:
ಈಗಾಗಲೇ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಆಚೆ ಬಂದಿರುವ ಶಾಸಕ ಎಚ್.ಡಿ ರೇವಣ್ಣ ಅವರು ಇದೀಗ ಪುತ್ರ ಪ್ರಜ್ವಲ್ ಪ್ರಕರಣದ ಬಗ್ಗೆ ಬಹಳ ಚಿಂತಿತರಾಗಿದ್ದಾರೆ. ಈ ಸಂಬಂಧ ಇಂದು ರೇವಣ್ಣ ಅವರು ಹಿರಿಯ ವಕೀಲ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರನ್ನು ಭೇಟಿ ಮಾಡಿ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಎಸ್ಐಟಿ ಅಧಿಕಾರಿಗಳ ನಡೆ ಏನು.?
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರಲು ಟಿಕೆಟ್ ಬುಕ್ ಮಾಡಿ ಕೊನೆ ಕ್ಷಣದಲ್ಲಿ ರದ್ದು ಮಾಡುತ್ತಿದ್ದಾರೆ. ಇಂದು ಸಹ ಕೊನೇ ಕ್ಷಣದಲ್ಲಿ ವಿಮಾನ ಹತ್ತದೇ ಬೆಂಗಳೂರಿಗೆ ಬರದೇ ಜರ್ಮನಿಯಲ್ಲೇ ಉಳಿದುಕೊಂಡಿದ್ದಾರೆ. ಇದರೊಂದಿಗೆ ಪ್ರಜ್ವಲ್ ಎರಡು ಬಾರಿ ಬುಕ್ ಮಾಡಿದ್ದ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡು ಎಸ್ಐಟಿ ಅಧಿಕಾರಿಗಳ ಜೊತೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ. ಪದೇ ಪದೇ ಟಿಕೆಟ್ ಬುಕ್ ಮಾಡಿ ಕೊನೆ ಕ್ಷಣದಲ್ಲಿ ರದ್ದು ಮಾಡುತ್ತಿರುವುದರಿಂದ ಮುಂದೆ ಏನು ಮಾಡಬೇಕು? ಎಂದು ಎಸ್ಐಟಿ ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ.