ಬೆಂಗಳೂರು: ಪಾಲಿಕೆಯ ಬ್ಲಾಕ್ ಸ್ಪಾಟ್ಗಳಲ್ಲಿ ಕಸ ಎಸೆದು, ದಂಡ ಪಾವತಿಸಲು ನಿರಾಕರಿಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸರ್ವಜ್ಞನಗರ ವಿಭಾಗದ 27ನೇ ವಾರ್ಡ್ನ ಬಾಣಸವಾಡಿ 7ನೇ ಮುಖ್ಯ ರಸ್ತೆಯಲ್ಲಿದ್ದ ಕಸದ ಬ್ಲಾಕ್ ಸ್ಪಾಟ್ ಸಂಪೂರ್ಣ ತೆರವುಗೊಳಿಸಿ, ಸ್ಥಳವನ್ನು ಸೌಂದರ್ಯೀಕರಣ ಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಜುಲೈ 16ರ ರಾತ್ರಿ ನಾಲ್ಕು ಮಂದಿ ಸ್ಥಳೀಯರು ಮತ್ತೆ ಅದೇ ಸ್ಥಳದಲ್ಲಿ ಕಸ ಎಸೆದಿದ್ದಾರೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ ಸರ್ವಜ್ಞನಗರ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳದಲ್ಲಿ ಕಸ ಎಸೆಯುತ್ತಿರುವುದನ್ನು ಗಮನಿಸಿದ್ದ ಪಾಲಿಕೆಯ ಮಾರ್ಷಲ್ಗಳು ಅವರನ್ನು ತಡೆದು ನಿಯಮಾನುಸಾರ ದಂಡ ವಿಧಿಸಲು ಮುಂದಾಗಿದ್ದಾರೆ. ಆದರೆ ಆ ವ್ಯಕ್ತಿಗಳು ದಂಡ ಪಾವತಿಸಲು ನಿರಾಕರಿಸಿದ್ದಲ್ಲದೇ, ಪುನಃ ಅದೇ ಸ್ಥಳದಲ್ಲಿ ಕಸ ಎಸೆದು ಹೋಗಿದ್ದಾರೆ. ಆದ್ದರಿಂದ ಆ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
ದೂರಿನ ಅನ್ವಯ ನಾಲ್ಕೂ ಜನರ ವಿರುದ್ಧ ಬಿಎನ್ಎಸ್ ಕಾಯ್ದೆ 280ರಡಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಈ ಭಾಗದಲ್ಲಿ ಕಸ ಚೆಲ್ಲಿದ್ದಕ್ಕಾಗಿ ಪ್ರಕರಣ ದಾಖಲಾಗಿರುವುದು ಇದೇ ಮೊದಲ ಬಾರಿಯಾಗಿದೆ. ಸಂಬಂಧಪಟ್ಟ ಆರೋಪಿಗಳನ್ನು ಪತ್ತೆಹಚ್ಚಿ ನೋಟಿಸ್ ನೀಡಲಾಗುವುದು ಎಂದು ಬಾಣಸವಾಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

