ನವದೆಹಲಿ: ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಪ್ರತಿ ನಾಗರಿಕನ ಹಕ್ಕಾಗಿದೆ. ಕೇವಲ ಪ್ರತಿಭಟನೆ, ಆಂದೋಲನ ನಡೆಸುತ್ತಿರುವವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸುವುದನ್ನು ಯಾವ ರೀತಿಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆನ್ನಲಾದ ಆರೋಪಗಳ ಮೇಲೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಕೋರ್ಟ್ ಹೇಳಿದೆ. ಇದೇ ವೇಳೆ ಪ್ರತಿಭಟನೆಯ ಸಮಯದಲ್ಲಿ ವಿದ್ಯಾರ್ಥಿಗಳಿಂದ ಕೆಲ ಪೊಲೀಸರು ದಾಳಿಗೆ ಒಳಗಾದ ಬಗ್ಗೆ ಅವರ ಕುಟುಂಬ ಸದಸ್ಯರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನೂ ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ, ವಿ. ಮೋಹನಾ ಅವರಿದ್ದ ಪೀಠವು ಸಮ್ಮತಿಸಿದೆ.
ಪ್ರತಿಭಟನೆಯ ವೇಳೆ ಪೊಲೀಸ್ ಸಿಬ್ಬಂದಿಯ ಮೇಲೂ ಹಲ್ಲೆ ನಡೆದಿದೆ ಎಂದು ವಕೀಲರೊಬ್ಬರು ಕೋರ್ಟ್ ಗಮನಕ್ಕೆ ತಂದಾಗ, ಯಾರೇ ಆಗಿರಲಿ. ಪ್ರತಿಯೊಬ್ಬ ವ್ಯಕ್ತಿಯ ಜೀವವೂ ಮುಖ್ಯ. ಎಲ್ಲರಿಗೂ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ ಎಂದು ಪೀಠವು ಹೇಳಿತು. ಪ್ರತಿಭಟನೆಗಳ ನಿರ್ವಹಣೆಗೆ ನಿರ್ದಿಷ್ಟ ನಿಯಮಾವಳಿ ಇರಬೇಕು. ಸೂಕ್ತ ಸ್ಥಳಾವಕಾಶ ನೀಡಬೇಕು. ಯಾವುದೇ ನಿರ್ಬಂಧಗಳು ಇರಬಾರದು. ಒಂದು ವೇಳೆ ಸಮಾಜವಿರೋಧಿ ಶಕ್ತಿಗಳು ನುಸುಳಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಕೋರ್ಟ್ ಸಲಹೆ ನೀಡಿದೆ.

