ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನಲ್ಲಿ ಇಂದು ಶುಕ್ರವಾರ ನಡೆಯಿತು
ನಿಗದಿಯಾದಂತೆ ಇಂದು ಮಧ್ಯಾಹ್ನ 3 ಗಂಟೆಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದುವರೆಯಿತು. ಎರಡು ಗಂಟೆಗಳವರೆಗೆ ಸುದೀರ್ಘ ಕಾಲ ರೇವಣ್ಣ ಪರ ವಕೀಲರಾದ ಸಿ.ವಿ.ನಾಗೇಶ್ ಮತ್ತು ಎಸ್ಐಟಿ ಪರ ವಕೀಲರು ನ್ಯಾಯಾಧೀಶರ ಮುಂದೆ ವಾದ-ಪ್ರತಿವಾದ ಮಂಡಿಸಿದರು. ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಅಂತ್ಯಗೊಳಿಸಿ ಸೋಮವಾರ ಮೇ 20 ಕ್ಕೆ ಜಾಮೀನು ಆದೇಶದ ತೀರ್ಪನ್ನು ಕಾಯ್ದಿರಿಸಿದರು.
ಈ ಮೂಲಕ ಪ್ರಕರಣದ ಆರೋಪಿಯಾಗಿರುವ ಎಚ್.ಡಿ.ರೇವಣ್ಣ ಅವರಿಗೆ ಸೋಮವಾರದವರೆಗೂ ಮಧ್ಯಂತರ ಜಾಮೀನು ದೊರೆತಿದೆ. ಒಟ್ಟಾರೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಜಾಮೀನು ಸಿಗುತ್ತದೆಯೇ? ಅಥವಾ ಜಾಮೀನು ಅರ್ಜಿ ವಜಾಗೊಂಡು ಮತ್ತೆ ಬಂಧನಕ್ಕೆ ಒಳಗಾಗುತ್ತಾರಾ? ಎಂಬ ಪ್ರಶ್ನೆಗೆ ಸೋಮವಾರ ನಗರದ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ತಮ್ಮ ಆದೇಶದ ಮೂಲಕ ಉತ್ತರಿಸಲಿದ್ದಾರೆ.