ಚಿತ್ರದುರ್ಗ: ಶಿಕ್ಷಣ ಸಚಿವರಿಗೆ ಮೊದಲು ಕಟಿಂಗ್ ಮಾಡಿಸಿಕೊಳ್ಳಿ ಎಂದು ಟಾಂಗ್ ಕೊಡುತ್ತಿದ್ದ ಬಿಜೆಪಿ ನಾಯಕರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದು, ನನಗೆ ಕಟಿಂಗ್ ಮಾಡುವವರು ಫ್ರೀ ಇಲ್ಲ, ವಿಜಯೇಂದ್ರ ಫ್ರೀ ಇದ್ದರೆ ಬಂದು ಕಟಿಂಗ್ ಮಾಡ್ಲಿ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಪದೇಪದೆ ನನ್ನ ಹೇರ್ ಸಟೈಲ್ ಬಗ್ಗೆಯೇ ಮಾತನ್ನಾಡುತ್ತಾರೆ. ಮೊದಲು ಶಿಕ್ಷಣ ಸಚಿವರು ಕಟಿಂಗ್ ಮಾಡಿಸಿಕೊಳ್ಳಲಿ ಎನ್ನುತ್ತಾರೆ, ನನಗೆ ಕಟಿಂಗ್ ಮಾಡುವವರು ಫ್ರೀ ಇಲ್ಲ, ವಿಜಯೇಂದ್ರ ಫ್ರೀ ಇದ್ದರೆ ಬಂದು ಕಟಿಂಗ್ ಮಾಡಿಕೊಡಲಿ, ಅದನ್ನು ಬಿಟ್ಟು ಟೀಕೆ ಮಾಡುದರೆ ಸರಿಯಿರುವುದಿಲ್ಲ ಎಂದು ಗುಡುಗಿದರು.
ಚಿತ್ರರಂಗದ ಬಗ್ಗೆ ವಿಜಯೇಂದ್ರ ಮಾತನಾಡುವ ಅಗತ್ಯತೆ ಇಲ್ಲ, ಚಿತ್ರರಂಗದಿAದ ಬಂದವರ ಕೊಡುಗೆ ರಾಜ್ಯಕ್ಕೆ ಏನು ಇಲ್ಲ ಎಂದು ಹೇಳಲಾಗದು. ಚಿತ್ರರಂಗ ಕೂಡ ರಾಜ್ಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅದರ ಅರಿವು ಬಿಜೆಪಿ ರಾಜ್ಯಾಧ್ಯಕ್ಷನಿಗಿರಲಿ ಎಂದು ಕಿಡಿ ಕಾರಿದ್ದಾರೆ.
ವಿಜಯೇಂದ್ರ ಮೊದಲು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಏನ್ ಮಾಡಬೇಕು ಅದನ್ನು ಮಾಡಲಿ ನನ್ನ ಹಣೆಬರಹ ನಾನು ನೋಡಿಕೊಳ್ತೇನೆ. ಶಿಕ್ಷಣ ಕ್ಷೇತ್ರವನ್ನು ಬಿಜೆಪಿ ಸರಕಾರ ಹೊಲಸು ಮಾಡಿದ್ದು ಎಲ್ಲಿರಗೂ ಗೊತ್ತಿದೆ. ಯಾರೋ ಗೊತ್ತುಗುರಿಯಿಲ್ಲದವನ ಕೈಗೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವ ಹೊಣೆಗಾರಿಕೆ ಕೊಟ್ಟು, ಪುಸ್ತಕಗಳಲ್ಲಿ ಏನೇನೋ ತುರುಕಿದ್ದರು ಎಂದರು.
ಬಿಜೆಪಿಯವರು ಮಾಡಿದ್ದ ಎಲ್ಲ ಹೊಲಸನ್ನು ನಾವು ತೊಡೆದಿದ್ದೇವೆ. ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಪಠ್ಯಪುಸ್ತಕದಲ್ಲಿದ್ದ ದೋಷವನ್ನು ಸರಿಪಡಿಸಿದ್ದೇವೆ. ಶಿಕ್ಷಕರ ಕೊರತೆಯಿದೆ ಎಂಬ ಕಾರಣಕ್ಕೆ ಶಿಕ್ಷಕರ ನೇಮಕಾತಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಹೊಸದಾಗಿ ಸರಕಾರಿ ಶಾಲೆಗಳ ಆರಂಭಿಸಲು ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.