ಚಾಮರಾಜನಗರ: ೫ ದಶಕಗಳ ಕಾಳ ಕರ್ನಾಟಕ ರಾಜಕಾರಣದಲ್ಲಿ ದಲಿತ ನಾಯಕನಾಗಿ ಗುರುತಿಸಿಕೊಂಡು, ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಶ್ರೀನಿವಾಸ್ ಪ್ರಸಾದ್ ಭಾನುವಾರ ರಾತ್ರಿ ನಿಧನರಾಗಿದ್ದಾರೆ.
ಸುದೀರ್ಘ ರಾಜಕಾರಣದ ನಂತರ ಕಳೆದ ಮಾರ್ಚ್ನಲ್ಲಿ ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಶ್ರೀನಿವಾಸ್ ಪ್ರಸಾದ್ ಸಿದ್ದರಾಮಯ್ಯ ಅವರ ಜತೆಗೆ ಮುನಿಸಿಕೊಂಡ ಕಾರಣ ಬಿಜೆಪಿ ಸೇರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದರು. ಇತ್ತೀಚೆಗೆ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು ಭಾನುವಾರ ತಡರಾತ್ರಿ ೧.೩೦ ಕ್ಕೆ ಇಹಲೋಕ ತ್ಯಜಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕಾಲು ನೋವು, ಮೂತ್ರಪಿಂಡ ಸೋಂಕು ಸೇರಿದಂತೆ ಇತರ ರೋಗ ಸಂಬAಧದಿAದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದಿದ್ದಾರೆ. ಪತ್ನಿ ಭಾಗ್ಯಲಕ್ಷ್ಮಿ, ಮೂವರು ಪುತ್ರಿಯರಾದ ಪ್ರತಿಮಾ ಪ್ರಸಾದ್, ಪೂರ್ಣಿಮಾ, ಪೂನಂ, ಅಳಿಯಂದಿರಾದ ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್, ಡಾ.ಮೋಹನ್ ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
೧೯೭೪ರ ಮಾರ್ಚ್ ೧೭ ರಂದು ಮೈಸೂರಿನ ಕೃಷ್ಣರಾಜ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ವಿ. ಶ್ರೀನಿವಾಸ ಪ್ರಸಾದ್ ಅವರು ಪ್ರಥಮ ಬಾರಿಗೆ ಪಕ್ಷೇತರ ಅಭ್ಯಥಿ೯ಯಾಗಿ ಒಂಟೆ ಗುರುತಿನಿಂದ ಸ್ಪಧಿ೯ಸಿದ್ದರು. ಅವರ ಸ್ಪರ್ಧೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಗಮನ ಸೆಳೆದಿತ್ತು. ೧೯೭೪ರ ಉಪ ಚುನಾವಣೆಯಿಂದ ೨೦೧೯ ರ ಲೋಕಸಭಾ ಚುನಾವಣೆ ತನಕ ಒಟ್ಟು ೧೪ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇದರಲ್ಲಿ, ೬ ಬಾರಿ ಲೋಕಸಭಾ ಚುನಾವಣೆ ಮತ್ತು ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದರು.
ಪ್ರಖರ ಅಂಬೇಡ್ಕರ್ ವಾದಿಯಾಗಿದ್ದ ಶ್ರೀನಿವಾಸ್ ಪ್ರಸಾದ್, ಚುನಾವಣೆಯಲ್ಲಿ ಸೋಲು – ಗೆಲುವು ಕಂಡಿದ್ದರೂ ಎಂದಿಗೂ ಧೃತಿಗೆಡದೇ ಅಂಬೇಡ್ಕರ್ ಚಿಂತನೆ, ದಲಿತಪರ ಹೋರಾಟದ ಮುಖ್ಯ ಧ್ವನಿಯಾಗಿದ್ದರು. ದಲಿತರ ಏಳಿಗೆಗಾಗಿ ಶ್ರಮಿಸಿದ ಅವರು ಉತ್ತಮ ಸಂಸದೀಯಪಟುವಾಗಿದ್ದರು. ಎಲ್ಲಾ ಚರ್ಚೆಗಳಲ್ಲೂ ಭಾಗಿಯಾಗುತ್ತಿದ್ದು, ಸಂಸತ್‌ನಲ್ಲಿ ಅಂಬೇಡ್ಕರ್ ವಿಚಾರಧಾರೆಗಳನ್ನು ನಿರರ್ಗಳವಾಗಿ ಮಂಡಿಸುತ್ತಿದ್ದರು.
ದಲಿತ ನಾಯಕರಾಗಿ ಸಮಾಜದಲ್ಲಿ ಸಾಕಷ್ಟು ತುಳಿತಕ್ಕೆ ಒಳಗಾದವರ ಪರವಾಗಿ ನಿಲ್ಲುತ್ತಿದ್ದರು. ಇವರು ೨೭ ವರ್ಷಗಳ ಸಂಸತ್ ಸದಸ್ಯರಾಗಿದ್ದ ವೇಳೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ವಿ.ಪಿ.ಸಿಂಗ್, ಚಂದ್ರಶೇಖರ್, ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಅಂದರೆ ಒಟ್ಟು ೭ ಪ್ರಧಾನಿಗಳನ್ನು, ಅವರ ಆಡಳಿತ ವೈಖರಿಯನ್ನು ಕಂಡಿದ್ದಾರೆ.