ಬಳ್ಳಾರಿ: ಬಳ್ಳಾರಿಯ ಜಿಂದಾಲ್ ಕಾರ್ಖಾನೆಯಲ್ಲಿ ನಡೆದ ಮೂವರು ಕಾರ್ಮಿಕರ ಸಾವಿನ ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯ ಆರು ಜನ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಬಳ್ಳಾರಿಯಲ್ಲಿರುವ ಜಿಂದಾಲ್ ಸಿಟಿಯ ಎಚ್‌ಎಸ್‌ಎಂ-೩ ಘಟಕದಲ್ಲಿ ಸ್ಟೀಲ್ ಮೆಟಿರೀಯಲ್ ತಂಪಾಗಿಸುವ ನೀರಿನ ಹೊಂಡಕ್ಕೆ ಬಿದ್ದು, ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಭುವನಹಳ್ಳಿ ಮೂಲದ ಜೆಡೆಪ್ಪ, ಬೆಂಗಳೂರಿನ ಸುಶಾಂತ್, ಚೆನ್ನೈ ಮೂಲದ ಮಹಾದೇವನ್ ಮೃತಪಟ್ಟ ಕಾರ್ಮಿಕರು ಎಂದು ಗುರುತಿಸಲಾಗಿತ್ತು.
ಪೈಪಲೈನ್ ಚೆಕ್ ಮಾಡುತ್ತಿದ್ದ ವೇಳೆ ಮೂವರು ಆಯತಪ್ಪಿ ನೀರಿನ ರಭಸಕ್ಕೆ ಸಿಲುಕಿಕೊಂಡು ಹೊಂಡಕ್ಕೆ ಬಿದ್ದಿದ್ದು, ಆಳವಾದ ಹೊಂಡದಲ್ಲಿ ಬಿದ್ದ ಪರಿಣಾಮ ಮೂವರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಘಟನೆ ನಡೆದ ಸ್ಥಳಕ್ಕೆ ತೋರಣಗಲ್ಲು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಪೊಲೀಸರು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಖಾನೆಯ ೬ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಸಿವಿಲ್ ವಿಭಾಗದ ಅಧಿಕಾರಿ, ಮೆಕಾನಿಕಲ್ ವಿಭಾಗದ ಅಧಿಕಾರಿ, ಸುರಕ್ಷತೆ ವಿಭಾಗದ ಸೂಪರ್ ವೈಸರ್, ಸುರಕ್ಷತಾ ವಿಭಾಗದ ಎವಿಪಿ, ಸಂಸ್ಥೆಯ ಉಪಾಧ್ಯಕ್ಷರ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವ ಪೊಲೀಸರು, ಎಲ್ಲ ಅಧಿಕಾರಿಗಳಿಗೆ ನೊಟೀಸ್ ನೀಡಿದ್ದಾರೆ.