ಮುಂಬಯಿ: ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಸನಾತನಾ ಸಂಸ್ಥೆಗೆ ಸೇರಿದ ಇಬ್ಬರಿಗೆ ಜೀವಾವಧಿ ಶಿಕ್ಷೆಯಾಗಿದ್ದು, ಇದೀಗ ಸಂಸ್ಥೆ ಮೇಲೆ ಇದೊಂದು ಉಗ್ರ ಸಂಘಟನೆ ಎಂಬ ಆರೋಪ ಕೇಳಿಬಂದಿದೆ.
ಮಹಾರಾಷ್ಟçದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಈ ಕುರಿತು ಗಂಭೀರ ಆರೋಪ ಮಾಡಿದ್ದು, ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಸಮಾಧಾನ ತಂದಿಲ್ಲ. ಬಲಪಂಥೀಯ ವಿಚಾರಧಾರೆಯುಳ್ಳ ಸನಾತನ ಸಂಸ್ಥೆಯ ಪಾತ್ರ ಇದರಲ್ಲಿದೆ ಎಂಬ ಬಗ್ಗೆ ತನಿಖೆ ವೇಳೆ ಗೊತ್ತಾಗಿದ್ದರೂ, ಈ ಕುರಿತು ನ್ಯಾಯಾಲಯದಿಂದ ಯಾವುದೇ ಆದೇಶ ಹೊರಬಿದ್ದಿಲ್ಲ ಎಂದು ಸಮಾಧಾನ ಹೊರಹಾಕಿದರು.
ಹತ್ಯೆಯಲ್ಲಿ ಸನಾತನಾ ಸಂಸ್ಥೆಯ ಪಾತ್ರವೇನು? ಹಾಗೂ ಪ್ರಕರಣದ ಪ್ರಮುಖ ಸೂತ್ರದಾರ ಯಾರು ಎಂಬ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ದಾಬೋಲ್ಕರ್ ಹತ್ಯೆಗೂ, ಗೋವಿಂದ ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಗೂ ಏನಾದರೂ ಸಂಬAಧ ಇದೆಯಾ ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲ ಎಂದು ಮಾಜಿ ಸಿಎಂ ಚೌಹಾಣ್ ಅಭಿಪ್ರಾಯಪಟ್ಟರು.
೨೦೧೦ರಲ್ಲಿ ಪೃಥ್ವಿರಾಜ್ ಚೌಹಾಣ್ ಸಿಎಂ ಆಗಿದ್ದಾಗ ಸನಾತನಾ ಸಂಸ್ಥೆಯನ್ನು ನಿಷೇಧಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಉಮೇಶ್ ಸಾರಂಗಿ, ಭಯೋತ್ಪಾದನಾ ನಿಗ್ರಹ ದಳದ ವರದಿ ಮೇಲೆ ಕೇಂದ್ರಕ್ಕೆ ಸಾವಿರ ಪುಟದ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ, ಈವರೆಗೆ ಯಾವುದೇ ಕ್ರಮವಾಗಿಲ್ಲ. ಈ ನಡುವೆ ದಾಬೋಲ್ಕರ್ ಹತ್ಯೆಯ ಆರೋಪಿಗಳೆಲ್ಲರೂ ಸನಾತನ ಸಂಸ್ಥೆಗೆ ಸೇರಿದವರಾಗಿದ್ದರು ಎಂಬ ಕಾರಣಕ್ಕೆ ಅದೊಂದು ಭಯೋತ್ಪಾದನಾ ಸಂಸ್ಥೆ ಎಂದು ಚೌಹಾಣ್ ಆರೋಪಿಸಿದ್ದಾರೆ.