ನವದೆಹಲಿ: ಕೇಂದ್ರ ಸರಕಾರ ಮನಸ್ಸು ಮಾಡಿದರೆ, ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಬಹುದು. ಹಾಗಾದರೆ, ಒಂದೇ ದಿನದಲ್ಲಿ ಪ್ರಜ್ವಲ್ ದೇಶಕ್ಕೆ ವಾಪಸಾಗಬೇಕಾಗುತ್ತದೆ. ಆದರೆ, ಕೇಂದ್ರದ ಬಿಜೆಪಿ ಸರಕಾರಕ್ಕೆ ಇಂತಹ ಮನಸ್ಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸಿಲುಕಿದ್ದಾರೆ. ಮೂರು ಎಫ್‌ಐಆರ್ ದಾಖಲಾಗಿದೆ. ಇಷ್ಟು ದೊಡ್ಡ ವಿಚಾರದಲ್ಲಿ ಕೂಡ ಕೇಂದ್ರ ಸರಕಾರ ಮೈಮರೆತು ವರ್ತಿಸುತ್ತಿದೆ. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಅವರನ್ನು ಪಾಸ್ ಪೋರ್ಟ್ ಮುಟ್ಟುಗೋಲು ಹಾಕಲು ಏಕೆ ಹಿಂಜರಿಯುತ್ತಿದೆ. ಅವರನ್ನು ತಡೆಯುತ್ತಿರುವ ಶಕ್ತಿ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಜರ್ಮನಿಗೆ ಪರಾರಿಯಾಗಿದ್ದರು. ಎಸ್‌ಐಟಿ ನೊಟೀಸ್ ನೀಡುತ್ತಿದ್ದಂತೆ, ಏಳು ದಿನದಲ್ಲಿ ಎಸ್‌ಐಟಿ ಮುಂದೆ ಹಾಜರಾಗುತ್ತೇನೆ. ಸತ್ಯ ಎಲ್ಲರಿಗೂ ಗೊತ್ತಾಗಲಿದೆ ಎಂದು ಟ್ವೀಟ್ ಮಾಡಿದ್ದರು. ವಕೀಲರ ಮೂಲಕ ಎಸ್‌ಐಟಿ ಮುಂದೆ ಮನವಿ ಮಾಡಿಕೊಂಡಿದ್ದರು. ಆದರೆ, ಈವರೆಗೆ ಶರಣಾಗಿಲ್ಲ.
ಅವರ ತಂದೆ ರೇವಣ್ಣ ಅವರನ್ನು ಇದೇ ಪ್ರಕರಣದಲ್ಲಿ ಎಸ್‌ಐಟಿ ಬಂಧನ ಮಾಡಿ, ಅರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದೆ. ಆದರೂ, ರೇವಣ್ಣ ಎಸ್‌ಐಟಿ ಮುಂದೆ ಶರಣಾಗದಿರುವುದು ಕುತೂಹಲದ ಸಂಗತಿಯಾಗಿದೆ.