ಬೆಂಗಳೂರು: ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟ ಅಂಬೇಡ್ಕರ್ ವಿಚಾರಧಾರೆಯ ಕುರಿತು ವಿಶ್ವವಿದ್ಯಾಲಯಗಳಲ್ಲಿ ವಿಸ್ತೃತ ಚರ್ಚೆ ನಡೆಯುವ ಅಗತ್ಯವಿದೆ ಎಂದು ಬೆಂಗಳೂರು ನಗರ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಲಿಂಗರಾಜ ಗಾಂಧಿಯವರು ಪ್ರತಿಪಾದಿಸಿರುವರು.
ಬೆಂಗಳೂರು ನಗರ ವಿಶ್ವ ವಿದ್ಯಾಲನಿಲಯದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ 133ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ ವಿಭಾಗಗಳ ಜೊತೆಗೆ ಕಾನೂನು ಕ್ಷೇತ್ರದಲ್ಲೂ ಮಹತ್ತರ ಕೊಡುಗೆಗಳನ್ನು ನೀಡಿರುವ ಬಾಬಾ ಸಾಹೇಬರ ಚಿಂತನೆಗಳು ನಿಂತ ನೀರಾಗಿರದೆ ನಿರಂತರ ವಿಮರ್ಶೆ ಮತ್ತು ಸಂಶೋಧನೆಗೆ ಅರ್ಹವಾದವೆಂದು ಅವರು ಅಭಿಪ್ರಾಯಪಟ್ಟರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಸಮಾನತೆಯ ತತ್ವವನ್ನು ಎತ್ತಿಹಿಡಿದ ಅಂಬೇಡ್ಕರ್ ದಮನಿತ ಜನರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟ ಮಹಾನಾಯಕನೆಂದು ಪ್ರೊ.ಗಾಂಧಿ ಬಣ್ಣಿಸಿದರು.
ಅಂಬೇಡ್ಕರ್ ಅವರ ಜೀವನ ವ್ರತ್ತಾಂತವನ್ನು ಸವಿವರವಾಗಿ ಪ್ರಸ್ತಾಪಿಸಿದ ಕುಲಸಚಿವರಾದ ಟಿ. ಜವರೇಗೌಡರು ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಅವಿರತ ಹೋರಾಟ ನಡೆಸಿದ ಧೀಮಂತ ನಾಯಕನ ಗುಣಗಾನ ಮಾಡಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಎನ್. ನರಸಿಂಹಮೂರ್ತಿಯವರು ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಿದ ಅಂಬೇಡ್ಕರ್ ವಿಶೇಷವಾಗಿ ಮಹಿಳೆಯರಿಗೂ ಮತದಾನದ ಹಕ್ಕು ಸಹಿತ ಸಮಾನ ಸ್ಥಾನಮಾನ ಕಲ್ಪಿಸುವ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರೆಂದು ವಿವರಿಸಿದರು.
ಕುಲಸಚಿವ (ಮೌಲ್ಯಮಾಪನ) ಡಾ. ಸಿ.ಎಸ್. ಆನಂದ ಕುಮಾರ್ ಮತ್ತು ವಿತ್ತಾಧಿಕಾರಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಡಾ. ಮಾಲಿನಿ ಕಾರ್ಯಕ್ರಮ ನಿರೂಪಿಸಿದರು. ಡಾ.ಗೋವಿಂದೇಗೌಡ ವಂದಿಸಿದರು. ಸಮಾರಂಭದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.