ಚಿಕ್ಕೋಡಿ: ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಇಂದು ಉತ್ಸಾಹದಿಂದ ಮತದಾನ ನಡೆದಿದೆ.
ಈ ಮಧ್ಯೆ ಕ್ಷೇತ್ರದ ಕಾಗವಾಡ ತಾಲ್ಲೂಕಿನ ಮಂಗಾವತಿ ಗ್ರಾಮದಲ್ಲಿ ವಿಚಿತ್ರ ಪ್ರಸಂಗ ನಡೆದಿದೆ. ಅದೇನೆಂದರೆ ಮಂಗಾವತಿ ಗ್ರಾಮದ ಮತಗಟ್ಟೆ ಸಂಖ್ಯೆ 154 ರಲ್ಲಿ ವ್ಯಕ್ತಿಯೊಬ್ಬ ಮತದಾನ ಮಾಡಿದ ನಂತರ ತನಗೆ ಇವಿಎಂ ಶಬ್ದವೇ ಕೇಳಿಸಲಿಲ್ಲ, ಆದ್ದರಿಂದ ಈ ಇವಿಎಂ ಸರಿಯಿಲ್ಲ, ಕೆಟ್ಟು ಹೋಗಿದೆ ಎಂದು ಮತಗಟ್ಟೆ ಸಿಬ್ಬಂದಿ ಜೊತೆಗೆ ಗಲಾಟೆ ಮಾಡಿದ್ದಾನೆ.
ಕುಡಿದ ಮತ್ತಿನಲ್ಲಿದ್ದ ಆ ಮತದಾರ ಮತಗಟ್ಟೆ 154 ರಲ್ಲಿ ಸಿಕ್ಕಾಪಟ್ಟೆ ಕೂಗಾಡಿ ಗಲಾಟೆ ಮಾಡುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಪೇದೆ ಬಂದಿದ್ದಾರೆ. ಇಷ್ಟಕ್ಕೂ ಜಗ್ಗದ ಆ ಅಸಾಮಿ ಬೋರಲು ಬಿದ್ದು ನನಗೆ ಇವಿಎಂ ಶಬ್ದ ಕೇಳಿಸಲಿಲ್ಲ, ನನ್ನ ವೋಟ್ ಹೋಯ್ತು ಎಂದು ಕೂಗಾಡಿದ್ದಾನೆ.
ತಕ್ಷಣವೇ ಪೊಲೀಸ್ ಪೇದೆ ಆತನನ್ನು ಅನಿವಾರ್ಯವಾಗಿ ಮತಗಟ್ಟೆ 154 ಕೇಂದ್ರದಿಂದ ನೂಕಿ ಹೊರಗೆ ಕಳಿಸಿದ್ದಾರೆ.