ರಾಜಕೀಯ ಸುದ್ದಿ

ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ಇ.ಡಿ ದಾಳಿ

Share It

ತಿರುವನಂತಪುರಂ: ಸಿಎಂಆರ್‌ಎಲ್ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ಇ.ಡಿ) ಇಂದು ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್ ಮತ್ತು ಇತರರ ಮನೆಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ಪ್ರಕಾರ, ಕೇರಳಂ ರಾಜಧಾನಿ ತಿರುವನಂತಪುರಂನಲ್ಲಿರುವ ವಿಜಯನ್ ಅವರ ಬಾಡಿಗೆ ಮನೆ ಒಳಗೊಂಡಂತೆ ರಾಜ್ಯದ ಒಟ್ಟು 10 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣವೇನು?: ಕೊಚ್ಚಿನ್ ಮಿನರಲ್ಸ್ ಆ್ಯಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಎಂಬ ಖಾಸಗಿ ಕಂಪನಿ 2018ರಿಂದ 2019ರ ಅವಧಿಯಲ್ಲಿ ವಿಜಯನ್ ಅವರ ಮಗಳು ಟಿ.ವೀಣಾ ಅವರ ಕಂಪನಿ ಎಕ್ಸಲಾಜಿಕ್ ಸೊಲ್ಯೂಷನ್ಸ್‌ಗೆ 1.72 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಪಾವತಿಸಿದೆ ಎಂದು ಆರೋಪಿಸಲಾಗಿದೆ. ಹೀಗಿದ್ದರೂ ಐಟಿ ಸಂಸ್ಥೆಯು ಕಂಪನಿಗೆ ಯಾವುದೇ ಸೇವೆ ಒದಗಿಸಿಲ್ಲ. ಈ ಪ್ರಕರಣದಲ್ಲಿ ಇ.ಡಿ ತನಿಖಾ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ನಿನ್ನೆ ಸಿಎಂಆರ್‌ಎಲ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾ ಮಾಡಿತ್ತು. ಇದಾದ ನಂತರ ಇದೀಗ ಇ.ಡಿ ದಾಳಿ ನಡೆಸಿದೆ.

ಟಿ.ವೀಣಾ ಒಡೆತನದ ಎಕ್ಸಲಾಜಿಕ್‌ ಕಂಪನಿಯು ಸಿಎಂಆರ್‌ಎಲ್‌ನಿಂದ ಪ್ರತಿ ತಿಂಗಳ ಪಾವತಿಯಾಗಿ ಯಾವುದೇ ಸೇವೆ ನೀಡದೇ ಕೋಟ್ಯಂತರ ರೂಪಾಯಿ ಪಡೆದ ಆರೋಪಗಳು ಕೇಳಿ ಬಂದ ಕಾರಣ, ಕೇಂದ್ರ ಸರ್ಕಾರ 2024ರಲ್ಲಿ ವಿಸ್ತೃತ ತನಿಖೆಗೆ ಆದೇಶ ನೀಡಿತ್ತು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಎಕ್ಸಲಾಜಿಕ್ ಕಂಪನಿ ವಿರುದ್ಧ ತನಿಖೆಗೆ ಆದೇಶಿಸಿತ್ತು. ಉನ್ನತ ಮಟ್ಟದ ಮೂವರು ಸದಸ್ಯರ ತಂಡ ತನಿಖೆಯ ಉಸ್ತುವಾರಿ ವಹಿಸಿತ್ತು.

CMRL ಮತ್ತು KSIDC ಎರಡಕ್ಕೂ ತಮ್ಮ ಪಾಲನ್ನು ಸ್ಪಷ್ಟಪಡಿಸಲು ಮೊದಲೇ ನೋಟಿಸ್ ನೀಡಲಾಗಿತ್ತು. ಮಾಸಿಕ ಪಾವತಿ ವಿವಾದದ ಆರೋಪಗಳಿಗೆ ಸಿಎಂಆರ್‌ಎಲ್ ಅಸ್ಪಷ್ಟ ಉತ್ತರ ನೀಡಿದ್ದು, ಕೆಎಸ್‌ಐಡಿಸಿ ಯಾವುದೇ ಉತ್ತರ ನೀಡಿರಲಿಲ್ಲ. ಇದಾದ ನಂತರ ಎಕ್ಸಲಾಜಿಕ್, ಸಿಎಂಆರ್‌ಎಲ್ ಮತ್ತು ಕೆಎಸ್‌ಐಡಿಸಿ ಕಂಪನಿಗಳ ವಹಿವಾಟಿನ ಬಗ್ಗೆ ವಿವರವಾಗಿ ತನಿಖೆಗೆ ಕ್ರಮ ಕೈಗೊಳ್ಳಲಾಗಿತ್ತು.


Share It

You cannot copy content of this page