ಬೆಂಗಳೂರು: ‘ಹೋಮ್‌ಮೇಕರ್’ ಪದ ಕೇವಲ ಮಹಿಳೆಯರಿಗೆ ಸೀಮಿತವಾಗಿಲ್ಲ, ಪುರುಷನಾಗಲಿ, ಮಹಿಳೆಯಾಗಲಿ ಕುಟುಂಬದ ಕಲ್ಯಾಣಕ್ಕಾಗಿ ಶ್ರಮಿಸುವ ಪ್ರತಿಯೊಬ್ಬರೂ ‘ಗೃಹ ನಿರ್ವಾಹಕರು’ ಎಂದು ಪರಿಗಣಿಸಲ್ಪಡುತ್ತಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ರಸ್ತೆ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದ ಮಹಿಳೆಗೆ ಮೋಟಾರು ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನೀಡಿದ್ದ ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ಕೋರಿ ಪಶ್ಚಿಮ ಬಂಗಾಳ ಮೂಲದ ಪಂಪಪಾಲ್ ಎಂಬ ಮಹಿಳೆ ಮತ್ತು ಪರಿಹಾರ ಘೋಷಣೆ ಮಾಡಿದ್ದ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಮೇಲ್ಮನವಿ ಅರ್ಜಿಗಳನ್ನು ಜಂಟಿಯಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.
ಉನ್ನತ ಶಿಕ್ಷಣ ಅಥವಾ ವೃತ್ತಿಪರ ಹಿನ್ನೆಲೆ ಹೊಂದಿರುವ ಮಾತ್ರಕ್ಕೆ ಯಾರೂ ಗೃಹಿಣಿಯಾಗಿರಲು ಅನರ್ಹರಾಗುವುದಿಲ್ಲ. ಪದವಿ, ಸ್ನಾತಕೋತ್ತರ ಪದವಿ ಅಥವಾ ಡಾಕ್ಟರೇಟ್ ಪಡೆದಿದ್ದರೂ ಸಹ ಅವರು ಕುಟುಂಬಕ್ಕಾಗಿ ನೀಡುವ ಸೇವೆಗಳ ಮೌಲ್ಯ ಕಡಿಮೆಯಾಗುವುದಿಲ್ಲ. ಗೃಹ ನಿರ್ವಾಹಕರೆಂದರೆ ಕೇವಲ ಅನಕ್ಷರಸ್ಥರಾಗಿರಬೇಕು, ದಿನದ 24 ಗಂಟೆಯೂ ಮನೆಯಲ್ಲೇ ಇರಬೇಕು ಅಥವಾ ಕೇವಲ ಮನೆಕೆಲಸಗಳನ್ನೇ ಮಾಡಬೇಕು ಎಂಬ ಹಳೆಯ ಸಾಂಪ್ರದಾಯಿಕ ಕಲ್ಪನೆ ತಪ್ಪು ಎಂದು ಪೀಠ ಹೇಳಿತು.
ಅವಿಶ್ರಾಂತವಾಗಿ ಶ್ರಮಿಸುತ್ತಾ, ಬೇಷರತ್ ಪ್ರೀತಿಯನ್ನು ತೋರುತ್ತಾ, ತನ್ನ ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಿ, ಕುಟುಂಬದ ಸುಖ-ಶಾಂತಿಗೆ ಆಧಾರಸ್ತಂಭವಾಗಿ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯೂ ಗೃಹಿಣಿಯೇ ಆಗಿದ್ದಾರೆ. ಇದು ಪುರುಷರಿಗೂ ಅನ್ವಯಿಸುತ್ತದೆ, ದುಡಿಯುವ ಉದ್ಯೋಗಸ್ಥರಿಗೂ ಅನ್ವಯಿಸುತ್ತದೆ ಎಂದು ಪೀಠ ತಿಳಿಸಿತು.
ಅರ್ಜಿದಾರರು ಮಾಡಿಸಿಕೊಂಡಿರುವ ವೈದ್ಯಕೀಯ ವಿಮೆಯಿಂದ ಆಸ್ಪತ್ರೆ ಖರ್ಚು ಮರುಪಾವತಿಯಾಗಿದೆ. ಈ ವಿಮೆಗೆ ಪ್ರೀಮಿಯಂ ಹಣವನ್ನು ಗ್ರಾಹಕರೇ ಪಾವತಿಸಿದ್ದಾರೆ. ಆದ್ದರಿಂದ ಆ ಮೊತ್ತವನ್ನು ದ್ವಿ ಲಾಭ ಎಂದು ಪರಿಗಣಿಸಿ ಪರಿಹಾರ ಮೊತ್ತದಲ್ಲಿ ಕಡಿತ ಮಾಡುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದೆ. ಅಪಘಾತಕ್ಕೆ ಒಳಗಾಗಿದ್ದ ಮಹಿಳೆಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿಗದಿಪಡಿಸಿರುವ ಕಾಲ್ಪನಿಕ ಆದಾಯವನ್ನು ಪರಿಗಣಿಸಿರುವ ಮಾಸಿಕ 8,000 ರೂ.ಗಳಂತೆ ಪರಿಹಾರ ನೀಡಿದೆ. ಜೊತೆಗೆ, ನ್ಯಾಯಾಧಿಕರಣ ನೀಡಿದ್ದ ಪರಿಹಾರಕ್ಕೆ 1,96,800 ರೂ ಹೆಚ್ಚಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತರಾಗಿರುವ ಮಹಿಳೆ 2013ರ ಅಕ್ಟೋಬರ್ 19ರಂದು ಬೆಂಗಳೂರಿನಿಂದ ಮಡಿಕೇರಿಗೆ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಅರ್ಜಿದಾರ ಪಂಪಪಾಲ್ ಅವರು ಶಾಶ್ವತ ದೈಹಿಕ ವೈಕಲ್ಯಕ್ಕೆ ಒಳಗಾಗಿದ್ದರು. ಚಾಲಕನ ವಿರುದ್ಧ ಪ್ರಕರಣ ದಾಖಲಾಗಿತ್ತು. ಅರ್ಜಿದಾರರು ಕುಶಾಲನಗರದ ಸರ್ಕಾರಿ ಆಸ್ಪತ್ರೆ ಹಾಗೂ ಮೈಸೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಇದಕ್ಕಾಗಿ 10 ಲಕ್ಷದವರೆಗೂ ಭರಿಸಿದ್ದರು. ಬೆಂಗಳೂರಿನ ಮೋಟಾರು ವಾಹನಗಳ ಪರಿಹಾರ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಕೋರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ವೈದ್ಯಕೀಯ ವೆಚ್ಚ ಸೇರಿ ಒಟ್ಟು 4,55,243 ರೂ.ಗಳ ಪರಿಹಾರ ಘೋಷಣೆ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಮತ್ತು ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅರ್ಜಿದಾರರು, ಅಪಘಾತಕ್ಕೂ ಮುನ್ನ ಅತಿಥಿ ಉಪನ್ಯಾಸಕರಾಗಿ ಮತ್ತು ಮನೆ ಪಾಠ ಮಾಡುವ ಮೂಲಕ ಮಾಸಿಕ 35 ಸಾವಿರ ರೂ.ವರೆಗೂ ದುಡಿಯುತ್ತಿದ್ದರು. ಘಟನೆ ನಡೆದ ದಿನ ಗೃಹಿಣಿಯಾಗಿ ಕೆಲಸ ಮಾಡುತ್ತಿದ್ದರು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪರಿಹಾರ ಪಾವತಿಸಬೇಕು ಎಂದು ಪೀಠಕ್ಕೆ ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಕೆಎಸ್‌ಆರ್‌ಟಿಸಿ ಪರ ವಕೀಲರು, ಅಪಘಾತದ ಸಮಯದಲ್ಲಿ ಅವರು ಉದ್ಯೋಗದಲ್ಲಿ ಇರಲಿಲ್ಲ. ಅರ್ಜಿದಾರರು ಉನ್ನತ ಶಿಕ್ಷಣ ಪಡೆದವರಾಗಿರುವುದರಿಂದ ಗೃಹಿಣಿಯಾಗಿರುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಭವಿಷ್ಯದ ನಷ್ಟಕ್ಕೆ ಪರಿಹಾರ ನೀಡಲಾಗದು ಎಂದು ವಾದಿಸಿದ್ದರು.

