ಬೆಂಗಳೂರು: ಕೋವಿಡ್ ಅಕ್ರಮಗಳ ತನಿಖೆಯ ಅಸ್ತ್ರವನ್ನು ಮತ್ತೇ ಮುಂದುವರಿಸಿರುವ ರಾಜ್ಯ ಸರಕಾರ ತನಿಖೆಗಾಗಿ ನಿಯೋಜನೆ ಮಾಡಿದ್ದ ವಿಚಾರಣಾ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಔಷಧಿ ಖರೀದಿ, ಆಮ್ಲಜನಕ ನಿರ್ವಹಣೆ ಹಾಗೂ ಕೊರತೆಯಿಂದ ಉಂಟಾದ ಸಾವು ನೋವು, ಬೆಡ್‌ಗಳ ನಿರ್ವಹಣೆಯಲ್ಲಿ ನಡೆದಿದ್ದ ಅವ್ಯವಹಾ ಸೇರಿದಂತೆ ವಿವಿಧ ಪ್ರಕರಣವನ್ನು ತನಿಖೆ ನಡೆಸಲು ಸರಕಾರ ಸಮಿತಿಯೊಂದನ್ನು ರಚನೆ ಮಾಡಿತ್ತು.
2021 ರ ಜುಲೈ ಹಾಗೂ ಆಗಸ್ಟ್ನಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯಲ್ಲಿ ಗಂಭೀರ ಆರೋಪದ ಕೇಳಿಬಂದ ಹಿನ್ನಲೆಯಲ್ಲಿ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚನೆ ಮಾಡಿದ್ದು, ವಿಚಾರಣೆಗಾಗಿ ಆದೇಶ ಮಾಡಲಾಗಿತ್ತು.
ಆಯೋಗದ ಅವಧಿಯನ್ನು ಮೂರು ತಿಂಗಳೀಗೆ ಸೀಮಿತ ಮಾಡಲಾಗಿತ್ತು. ನಂತರ ನವೆಂಬರ್ 2023 ಕ್ಕೆ ಅಧಿಸೂಚನೆ ಹೊರಡಿಸಿ, ಮೇ 24, 2024 ವರೆಗೆ ವಿಸ್ತರಣೆ ಮಾಡಲಾಗಿತ್ತು. ತನಿಖೆಗೆ ನ್ಯಾಯಾಧೀಶರು ಮತ್ತಷ್ಟು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಇದೀಗ ಮತ್ತೇ ಆಯೋಗದ ಕಾಲಾವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಸರ್ಕಾರ ಹೊಸದಾಗಿ ಅಧಿಸೂಚನೆ ಹೊರಡಿಸಿದ್ದು, ವಿಚಾರಣಾ ಆಯೋಗದ ಅವಧಿಯನ್ನು ಆ. 21 ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್- 19 ನಿರ್ವಹಣೆ ಸಂದರ್ಭದಲ್ಲಿ ವ್ಯಾಪಕ ಅಕ್ರಮಗಳನ್ನು ಎಸಗಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಪಿಪಿಪಿ ಕಿಟ್, ಮಾಸ್ಕ್ ಹಾಗೂ ಇತರ ಔಷಧಿಗಳ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪ ಮಾಡಲಾಗಿತ್ತು.