ಚನ್ನಗಿರಿ: ಲಾಕಪ್ ಡೆತ್ ಆರೋಪದಡಿಯಲ್ಲಿ ಪೊಲೀಸ್ ಠಾಣೆಯ ಮೇಲೆ ಪುಂಡಾಟ ಮೆರೆದ, ಪ್ರಕರಣವನ್ನು ಈಗಾಗಲೇ ಸಿಐಡಿಗೆ ವಹಿಸಲಾಗಿದ್ದು, ಸಿಐಡಿ ಪೊಲೀಸರು ಇಂದಿನಿಂದ ಕಿಡಿಗೇಡಿಗಳಿಗೆ ಡ್ರಿಲ್ ಮಾಡುವ ಸಾಧ್ಯತೆಯಿದೆ.
ಪ್ರಕರಣದ ಸಂಬಂಧ ಈಗಾಗಲೇ 25 ಕ್ಕೂ ಜನರನ್ನು ಬಂಧನ ಮಾಡಲಾಗಿದೆ. ಇನ್ನುಳಿದ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲು ಸೂಕ್ತ ಸಾಕ್ಷಿಗಳ ಹುಡುಕಾಟದಲ್ಲಿದ್ದಾರೆ. ಸಿಸಿಟಿವಿ ದೃಶ್ಯಾವಗಳಿಗಳು, ಜೀಪು, ಸ್ಕೂಟರ್‌ಗೆ ಹಾನಿ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತದೆ. ಒಟ್ಟಾರೆ ಕಾನೂನು ಕೈಗೆತ್ತಿಕೊಂಡವರನ್ನು ಮಟ್ಟ ಹಾಕಲು ಸಿಐಡಿ ತೀರ್ಮಾನಿಸಿದೆ.
ಇಂದು ಸಿಐಡಿ ಅಧಿಕಾರಿಗಳು ಚನ್ನಗಿರಿಗೆ ಆಗಮಿಸಲಿದ್ದು, ಪ್ರಕರಣದಲ್ಲಿ ಅಮಾನತುಗೊಂಡಿರುವ ಅಧಿಕಾರಿಗಳನ್ನು ವಿಚಾರಣೆ ನಡೆಸಲಿದ್ದಾರೆ. ನಂತರ ಪ್ರಕರಣದಲ್ಲಿ ಬಂಧನವಾಗಿರುವ ಕಿಡಿಗೇಡಿಗಳಿಗೆ ಡ್ರಿಲ್ ಮಾಡಿಸಲಿದ್ದು, ಉಳಿದವರ ಶೋಧಕ್ಕೆ ಬಲೆ ಬೀಸಲಿದ್ದಾರೆ. ಪ್ರಕರಣದಲ್ಲಿ ಸಾವಿಗೀಡಾಗಿರುವ ವ್ಯಕ್ತಿಗೆ ನ್ಯಾಯ ಕೊಡಿಸುವುದು ಮಾತ್ರವಲ್ಲದೇ, ಆತನ ಸಾವಿನ ನೆಪದಲ್ಲಿ ಪೊಲೀಸರ ಮೇಲೆ ದರ್ಪ ತೋರಿದವರನ್ನು ಮಟ್ಟಹಾಕಲು ಸರಕಾರ ತೀರ್ಮಾನಿಸಲಾಗಿದೆ.
ಆದಿಲ್ ಎಂಬಾತನ ಕುಟುಂಬದ ಸದಸ್ಯರಿಗೆ ಶವಪರೀಕ್ಷೆಯ ವರದಿ ನಂತರ ಆತನ ಸಾವಿಗೆ ನಿಖರ ಕಾರಣ ತಿಳಿದುಬಂದ ನಂತರ ಸೂಕ್ತ ಪರಿಹಾರದ ವ್ಯವಸ್ಥೆ ಮಾಡಲು ಯೋಚಿಸಲಾಗುತ್ತಿದೆ. ಈ ನಡುವೆ ಭಜರಂಗ ದಳ, ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಠಾಣೆಯ ಮೇಲೆ ನಡೆದ ದಾಳಿಯನ್ನು ವಿರೋಧಿಸಿ, ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಇದು ಚನ್ನಗಿರಿಯಲ್ಲಿ ಬಿಗುವಿನ ವಾತಾವರಣಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ದಕ್ಕೆಯಾಗದಂತೆ ಪ್ರಕರಣದ ತನಿಖೆ ನಡೆಸುವುದು, ಪ್ರಕರಣದಲ್ಲಿ ನಿಜವಾಗಿಯೂ ಲಾಕಪ್ ಡೆತ್ ಆಗಿದ್ದರೆ ಆತನ ಕುಟುಂಬಕ್ಕೆ ನ್ಯಾಯ ಒದಗಿಸುವುದು, ಅದಕ್ಕೆ ಕಾರಣವಾದ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳುವುದು, ಜತೆಜತೆಗೆ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳಿಗೆ ಬುದ್ದಿ ಕಲಿಸುವುದ ಜವಾಬ್ದಾರಿ ಸಿಐಡಿ ಪೊಲೀಸರ ಹೆಗಲಿಗೇರಿದೆ.