ಅಪರಾಧ ಸುದ್ದಿ

ಹೋಟೆಲ್‌ನಲ್ಲಿ ಅಗ್ನಿ‌ ಅವಘಡ: ಓರ್ವ ಸಾವು, ನಾಲ್ವರು ಪಾರು

Share It

ಬೆಂಗಳೂರು: ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಸಾವನ್ನಪ್ಪಿದ ಘಟನೆ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.

ನಾಗರಬಾವಿಯ ಹೋಟೆಲ್‌ವೊಂದರಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರು ತೀವ್ರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ನಾಗರಬಾವಿ ಹೊರವರ್ತುಲ ರಸ್ತೆ ಪಕ್ಕದ ಸರ್ವಿಸ್‌ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಅಲ್ಲೇ ಕೆಲಸ ಮಾಡುತ್ತಿದ್ದ 8 ಮಂದಿ ಸಿಬ್ಬಂದಿ ವಾಸವಿದ್ದ ಹೋಟೆಲ್‌ ಕಟ್ಟಡದ ಮೇಲಿನ ಮಹಡಿಗೂ ಬೆಂಕಿ ವ್ಯಾಪಿಸಿದೆ. ದಟ್ಟ ಹೊಗೆಯಿಂದ ಸಿಬ್ಬಂದಿ ಭೀಮಾ, ಶಿವಾನಂದ್, ಸತೀಶ್‌, ರಾಜಕುಮಾರ್‌ ಸೇರಿ ಐವರು ಅಸ್ವಸ್ಥಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

45 ವರ್ಷದ ರಾಜಕುಮಾರ್ ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಳಿದ ನಾಲ್ವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು‌ ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ದಳದ ಕಾರ್ಯಾಚರಣೆ ಮುಂದುವರೆದಿದ್ದು, ಅವಘಡಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.


Share It

You cannot copy content of this page