ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿಯ ಅಪಸ್ವರದ ನಡುವೆ ಹಲವು ಕ್ಷೇತ್ರಗಳಲ್ಲಿ ಮಾಜಿ ಶಾಸಕರು ಅಸಮಾಧಾನಗೊಂಡು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ. ಅದರಲ್ಲೂ ಕೌಟುಂಬಿಕ ರಾಜಕಾರಣದಲ್ಲಿ ಒಡೆದಾಳುವ ನೀತಿಯಿಂದ ಸಿಟ್ಟಾಗಿರುವ ಕಲಬುರಗಿ ಜಿಲ್ಲೆಯ ಅಫ್ಜಲ್‍ಪುರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿದ್ದರೆ, ಮಂಡ್ಯ ಜಿಲ್ಲೆಯ ನಾಗಮಂಗಲದ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಸಭೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಮಾಲೀಕಯ್ಯ ಗುತ್ತೇದಾರ್ ಅವರು ಬಿಜೆಪಿಯಲ್ಲಿದ್ದು, ಕಳೆದ ಬಾರಿ ಅಫ್ಜಲ್‍ಪುರದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಎಂ.ವೈ.ಪಾಟೀಲ್ ವಿರುದ್ಧ ಸೋಲು ಕಂಡಿದ್ದರು. ಇದಕ್ಕೆ ಮೂಲ ಕಾರಣ ಅವರ ಸಹೋದರ ಸಂಬಂಧಿ ನಿತಿನ್ ಗುತ್ತೇದಾರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾಗಿತ್ತು.
ಪ್ರಸ್ತುತ ಬಿಜೆಪಿ ನಾಯಕರು ನಿತಿನ್ ಗುತ್ತೇದಾರ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಸಹಜವಾಗಿ ಅಸಮಾಧಾನಗೊಂಡಿರುವ ಮಾಲೀಕಯ್ಯ ಗುತ್ತೇದಾರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.