ಆರೋಗ್ಯ ಸುದ್ದಿ

ಎಬೋಲಾ ಸಾಂಕ್ರಾಮಿಕ: ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ

Share It

ಜಾಗತಿಕವಾಗಿ ಎಬೋಲಾ ವೈರಸ್ ಹರಡುವಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO), ಇದನ್ನು ಅಂತಾರಾಷ್ಟ್ರೀಯ ಮಟ್ಟದ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ (PHEIC) ಎಂದು ಅಧಿಕೃತವಾಗಿ ಘೋಷಿಸಿದೆ. 2005ರ ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳ (IHR) ಅಡಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಉಗಾಂಡಾಗಳಲ್ಲಿ ಎಬೋಲಾ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, WHOನ ತುರ್ತು ಸಮಿತಿಯು ರೋಗ ನಿಯಂತ್ರಣಕ್ಕಾಗಿ ಹಲವಾರು ಮಾರ್ಗಸೂಚಿಗಳನ್ನು ರೂಪಿಸಿದೆ.

ವೈರಸ್ ಪತ್ತೆಯಾದ ಪ್ರದೇಶಗಳಿಂದ ಆಗಮಿಸುವ ಪ್ರಯಾಣಿಕರಲ್ಲಿ ಜ್ವರದಂತಹ ಲಕ್ಷಣಗಳನ್ನು ಪತ್ತೆಹಚ್ಚಲು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಅಂತಹ ಪ್ರದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಬೇಕೆಂದು ಸೂಚಿಸಲಾಗಿದೆ.

ಭಾರತದಲ್ಲಿ ಇದುವರೆಗೆ ಎಬೋಲಾ ಸೋಂಕಿನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಆದರೂ ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದು, ಎಲ್ಲಾ ಆರೋಗ್ಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಕಾಂಗೋ ದೇಶದಲ್ಲಿ ಮಾತ್ರ ಎಬೋಲಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 200ನ್ನು ದಾಟಿದೆ. ಇಲ್ಲಿಯವರೆಗೆ ಒಟ್ಟು 867 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಕಳೆದ ಅರ್ಧ ಶತಮಾನದಲ್ಲಿ ಆಫ್ರಿಕಾ ಖಂಡದಲ್ಲಿ ಎಬೋಲಾ ಕಾರಣದಿಂದ 15,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.


Share It

You cannot copy content of this page