ಬೆಂಗಳೂರು: ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿನ ಚುನಾವಣಾ ಪ್ರಚಾರ ಸಭೆಯಲ್ಲಿ ನೀಡಿದ ಹೇಳಿಕೆಯಿಂದ ರಾಜ್ಯದ ಯಾವುದೇ ತಾಯಂದಿರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಜೆಡಿಎಸ್ ಮಹಿಳಾ ಮುಖಂಡರೊಂದಿಗೆ ತುರ್ತು ಸುದ್ದಿಗೋಷ್ಠಿಯನ್ನು ನಡೆಸಿದ ಅವರು, ಮಹಿಳೆಯರಿಗೆ ಅಗೌರವ ತರುವಂಥ ಮಾತನ್ನು ಆಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಾಲ ಮಾಡುತ್ತಿದ್ದಾರೆ. ಸಾಲದ ಹೊರೆ ನಾಡಿನ ಜನರ ಮೇಲೆ ಹೊರಿಸುತ್ತಿದ್ದಾರೆ. ತಾಯಂದಿರಿಗೆ 2 ಸಾವಿರ ರೂ. ನೀಡಿ ಅವರ ಯಜಮಾನರ ಜೇಬಿನಿಂದ ಪಿಕ್‍ಪ್ಯಾಕೇಟ್ ಮಾಡಿ ಐದಾರು ಸಾವಿರ ವಸೂಲಿ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ತಾಯಂದಿರು ಎಚ್ಚರಿಕೆಯಿಂದಿರಬೇಕು. ಗ್ಯಾರಂಟಿಗೆ ಮರುಳಾಗಿ ದಾರಿ ತಪ್ಪಬಾರದು ಎಂದು ಹೇಳಿದ್ದೇನೆಯೇ ಹೊರತು, ಅಗೌರವದಿಂದಲ್ಲ. ನಾನು ಬಳಸಿರುವ ಶಬ್ದದಲ್ಲಿ ಯಾವುದೇ ಅಶ್ಲೀಲತೆ ಇಲ್ಲ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಅಧ್ಯಕ್ಷರು, ಹಿರಿಯ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಕಾರಿಗಳು ನನ್ನ ಈ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡಿ ಮಹಿಳೆಯರ ಪರವಾಗಿ ಕಂಬನಿ ಮಿಡಿದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರು ಮಹಿಳೆಯರ ಬಗ್ಗೆ ನೀಡಿರುವ ಅಗೌರವ ತರುವಂಥ ಹಲವು ಹೇಳಿಕೆಗಳ ನಿದರ್ಶನವನ್ನು ನೀಡಬಹುದು ಎಂದರು.