ಬೆಂಗಳೂರು: ಮತ್ತೊಂದು ಪ್ರಕರಣದಲ್ಲಿ ಜಾಮೀನಿಗಾಗಿ ಇಡೀ ದಿನ ಸರ್ಕಸ್ ನಡೆದರೂ, ಫಲ ಸಿಕ್ಕದ ಬೇಸರದಲ್ಲಿ ದೇವೇಗೌಡರ ಮನೆಗೆ ಎಚ್.ಡಿ. ರೇವಣ್ಣ ಆಗಮಿಸಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಭೇಟಿ ನೀಡಿದ್ದಾರೆ.
ರೇವಣ್ಣ ಮೇಲಿನ ಪ್ರಕರಣ, ಜಾಮೀನು ಅರ್ಜಿಯ ತಕರಾರು ಮತ್ತು ಪ್ರಜ್ವಲ್ ವಿದೇಶದಿಂದ ಬರದಿರುವುದು ಕುರಿತಂತೆ ಚರ್ಚೆ ನಡೆಸುವ ಸಲುವಾಗಿಯೇ ಕುಮಾರಸ್ವಾಮಿ ಮತ್ತು ರೇವಣ್ಣ ಅವರನ್ನು ದೊಡ್ಡಗೌಡರು ಕರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ರೇವಣ್ಣ ಜಾಮೀನು ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು, ಜತೆಗೆ, ಉಳಿದ ಪ್ರಕರಣಗಳ ಸ್ಥಿತಿಗತಿ ಏನಾಗುತ್ತದೆ ಎಂಬ ಬಗ್ಗೆ ವಕೀಲರು, ಕಾನೂನು ಪಂಡಿತರ ಸಲಹೆ ಪಡೆಯುವುದು ಸೇರಿದಂತೆ, ಮುಂದೆ ಪ್ರಜ್ವಲ್ ನನ್ನು ರಾಜ್ಯಕ್ಕೆ ವಾಪಸ್ ಕರೆಯಿಸಬೇಕಾ? ಬೇಡವಾ ಎಂಬ ಬಗ್ಗೆಯೆಲ್ಲ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಪ್ರಜ್ವಲ್ ಪ್ರಕರಣದಿಂದ ರೇವಣ್ಣ ಜೈಲಿಗೆಹೋಗಬೇಕಾದ ಪರಿಸ್ಥಿತಿ ಬಂದಿದೆ. ಆತನನ್ನು ಕರೆಯಿಸಿ, ಪೊಲೀಸರ ಮುಂದೆ ಶರಣಾಗುವಂತೆ ಮಾಡಿ, ನಂತರ ಕಾನೂನು ಹೋರಾಟ ನಡೆಸಿದರೆ ಹೇಗೆ? ಎಂಬ ಬಗ್ಗೆಯೂ ದೊಡ್ಡಗೌಡರು ಮಕ್ಕಳಿಗೆ ಸಲಹೆ ನೀಡಲಿದ್ದಾರೆ ಎನ್ನಲಾಗಿದೆ. ಜತೆಗೆ, ಪ್ರಕರಣವನ್ನು ಮತ್ತಷ್ಟು ಗಂಭೀರವನ್ನಾಗಿಸುವ ಪ್ರಯತ್ನವನ್ನು ನಾವಾಗಿಯೇ ಮಾಡುವುದು ಬೇಡ, ಇದು ನಮ್ಮ ಕುಟುಂಬದ ರಾಜಕೀಯ ಜೀವನಕ್ಕೆ ಹಿನ್ನಡೆಯಾಗಲಿದೆ ಎಂದು ಗೌಡರು ಸಲಹೆ ನೀಡಲಿದ್ದಾರೆ ಎನ್ನಲಾಗಿದೆ.